ಆಟಕ್ಕುಂಟು ಲೆಕ್ಕಕ್ಕಿಲ್ಲದ ಜಲಾಗಾರ

Jalagaar
Published on

ಲಕ್ಷ್ಮೇಶ್ವರ: ಐವತ್ತು ಸಾವಿರ ಜನಸಂಖ್ಯೆಯುಳ್ಳ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಹುತೇಕ ಜಲಾಗಾರಗಳು ನಿರುಪಯುಕ್ತವಾಗಿವೆ.

ಸದ್ಯದ ಜನಸಂಖ್ಯೆ ಆಧರಿಸಿ ನಿತ್ಯ 8 ಎಂಎಲ್‌ಡಿ ನೀರು ಬೇಕು. ಆದರೆ, ಪೂರೈಕೆಯಾಗುವುದು 3.5 ಎಂಎಲ್‌ಡಿ ಮಾತ್ರ. ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತದೆ. 20 ವರ್ಷಗಳ ಹಿಂದೆ ನಿರ್ಮಿಸಿದ ಪೈಪ್‌ಲೈನ್‌ಗಳು ಸಂಪೂರ್ಣ ಹಾಳಾಗಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತದೆ. ಅಲ್ಲದೆ, ಮಾರ್ಗದ ಹಳ್ಳಿಗಳಿಗೂ ಪೂರೈಸಿ ಬಳಿಕ ಪಟ್ಟಣಕ್ಕೆ ಬರುವ ನೀರು ಹತ್ತಾರು ವಾರ್ಡ್‌ಗಳಿಗೆ ಮಾತ್ರ ಸರಬರಾಜಾಗುತ್ತದೆ. ಉಳಿದ ಭಾಗಕ್ಕೆ ಪಟ್ಟಣದಲ್ಲಿನ ಬೋರ್‌ವೆಲ್‌ನಿಂದ ಸರಬರಾಜಾಗುತ್ತದೆ. ಹಳೆಯದಾದ ಪೈಪ್‌ಲೈನ್-ಯಂತ್ರೋಪಕರಣಗಳು, ಪದೇ ಪದೆ ದುರಸ್ತಿ, ನಿರ್ವಹಣೆ ಮತ್ತಿತರ ಕಾರಣಗಳಿಂದ 10 ರಿಂದ 15 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

ಪಟ್ಟಣದ ಉಪನಾಳ ನಗರದಲ್ಲಿ 5 ಲಕ್ಷ ಲೀ. ಮತ್ತು 6.5 ಲಕ್ಷ ಲೀ. ಸಾಮರ್ಥ್ಯದ ಜಲಾಗಾರಗಳಿವೆ. ಒಂದನ್ನು ದುರಸ್ತಿಗಾಗಿ 6 ತಿಂಗಳ ಹಿಂದೆಯೇ ಸ್ಲ್ಯಾಬ್ ತೆಗೆಯಲಾಗಿದೆ. ಹೀಗಾಗಿ ಸದ್ಯ ಒಂದು ಜಲಾಗಾರದಿಂದ ನೀರು ಪೂರೈಕೆಯಾಗುತ್ತಿದೆ. ಇನ್ನು ನಗರೋತ್ಥಾನದಡಿ ಪಟ್ಟಣದ ಕೆಂಪಿಗೇರಿ ಬಳಿ 5 ಲಕ್ಷ ಲೀ., ಮಂಜಲಾಪುರ ಹತ್ತಿರ 5 ಲಕ್ಷ ಲೀ., ಬಸವೇಶ್ವರ ನಗರದಲ್ಲಿ 5 ಲಕ್ಷ ಲೀ. ಸಾಮರ್ಥ್ಯದ ಜಲಾಗಾರಗಳನ್ನು ನಿರ್ಮಿಸಲಾಗಿದೆ. ಆದರೆ, ಈ ಜಲಾಗಾರಕ್ಕೆ ಜಲಮೂಲವಿಲ್ಲ ಮತ್ತು ಪೈಪ್‌ಲೈನ್ ಕಾಮಗಾರಿಯೇ ಆಗಿಲ್ಲ. ಇದರಿಂದ ಜಲಾಗಾರಗಳು ಹಾಳಾಗುತ್ತಿವೆ. ಎಲ್ಲ ಜಲಾಗಾರಗಳಲ್ಲಿ ನೀರು ಸಂಗ್ರಹವಾದರೆ ನೀರಿನ ಸಮಸ್ಯೆಗೊಂದಿಷ್ಟು ಪರಿಹಾರ ಸಿಗಲಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.

ಪ್ರತಿಭಟನೆ ಸಾಮಾನ್ಯ

ಪೈಪ್‌ಲೈನ್, ಯಂತ್ರೋಪಕರಣಗಳು ಹಾಳಾಗಿವೆ. ಹೊಸ ಪೈಪ್‌ಲೈನ್ ಅಳವಡಿಸಬೇಕು. ಜಲಾಗಾರಕ್ಕೆ ಪೈಪ್‌ಲೈನ್ ಅಳವಡಿಸಿ ನದಿ ಮತ್ತು ಬೋರ್‌ವೆಲ್ ನೀರಿನಿಂದ ಎಲ್ಲ ಭಾಗಗಳಿಗೆ ನೀರು ಪೂರೈಸಬೇಕು. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕಂಕಣಬದ್ಧರಾಗಬೇಕು. ನಿರ್ಲಕ್ಷ ಮುಂದುವರಿದರೆ ಮುಂದಿನ ದಿನಮಾನದಲ್ಲಿ ಪಟ್ಟಣದ ಜನತೆ ನೀರಿಗಾಗಿ ಪರಿತಪಿಸುವ ಮತ್ತು ನಿತ್ಯವೂ ಪುರಸಭೆಯ ಮುಂದೆ ಹೋರಾಟ, ಪ್ರತಿಭಟನೆ ಸಾಮಾನ್ಯವಾಗುತ್ತದೆ ಎಂಬುದು ನಾಗರಿಕರ ಅನಿಸಿಕೆಯಾಗಿದೆ.

ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೊಸ ಪೈಪ್‌ಲೈನ್‌ಗಾಗಿ ಕ್ರಿಯಾಯೋಜನೆ ಸಿದ್ಧಪಡಿಸಿ ಕೆಯುಡಬ್ಲುೃಎಸ್‌ಗೆ ಕಳುಹಿಸಲಾಗಿದೆ. ಬೋರ್‌ವೆಲ್ ದುರಸ್ತಿ, ಮಾರ್ಗದ ಗ್ರಾಮಗಳಿಗೆ ನದಿ ನೀರಿನ ಸಂಪರ್ಕ ಕಡಿತ, ಎಲ್ ಆ್ಯಂಡ್ ಟಿ ಕಂಪನಿಯಿಂದ ನೀರಿನ ಸಹಕಾರ, ಬೋರ್‌ವೆಲ್ ದುರಸ್ತಿ ಮಾಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಜಲಾಗಾರಕ್ಕೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು.ಶಂಕರ ಹುಲ್ಲಮ್ಮನವರ, ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net