

ರಾಯಚೂರು: ನಾವಿನ್ಯತೆ, ಪ್ರಸ್ತುತತೆ ಹಾಗೂ ಆನ್ವಯಿಕತೆ ಸಂಶೋಧನೆಯ ಪ್ರಮುಖ ಗುಣಲಕ್ಷಣವಾಗಿದ್ದು, ಸಂಶೋಧನಾ ಕಾರ್ಯದ ಕೊನೆಯಲ್ಲಿ ತಾತ್ವಿಕ ತೀರ್ಮಾನಕ್ಕೆ ಬರಲು ಸಾಧ್ಯವಾಗದಿದ್ದರೆ ಅದು ನಿಜವಾದ ಸಂಶೋಧನೆ ಎನ್ನಿಸಿಕೊಳ್ಳುವುದಿಲ್ಲ ಎಂದು ಕರ್ನಾಟಕ ವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ.ಗುರುರಾಜ ಹಡಗಲಿ ಹೇಳಿದರು.
ರಾಯಚೂರು ವಿವಿಯ ಕೃಷ್ಣತುಂಗಾ ಸಭಾಂಗಣದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಶೋಧನೆ ಎನ್ನುವುದು ವಿದ್ವತ್ಪೂರ್ಣ ಕಾರ್ಯವಾಗಿದ್ದು, ದಾಖಲೆ ರೂಪದಲ್ಲಿ ಉಳಿದುಕೊಳ್ಳುತ್ತದೆ ಎಂದರು.
ಸಂಶೋಧಕನಿಗೆ ಸಂಶೋಧನಾ ಬರವಣಿಗೆಯ ಸ್ವರೂಪ, ಸಂಶೋಧನೆ ಕೈಗೊಳ್ಳಲು ವಿಜ್ಞಾನಿಕ ಮಾರ್ಗಗಳು ಯಾವವು ಎನ್ನುವ ಅರಿವು ಇದ್ದಾಗ ಮಾತ್ರ ಸಂಶೋಧನೆಯನ್ನು ಯೋಗ್ಯ ರೀತಿಯಲ್ಲಿ ಸಾದರ ಪಡಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಲಾ ವಿಭಾಗದ ಡೀನ್ ಪ್ರೊ.ಸಿ.ಎಸ್.ಪಾರ್ವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಶೋಧನೆ ಕೂಡಾ ಉನ್ನತ ಶಿಕ್ಷಣದ ಒಂದು ಭಾಗವಾಗಿದ್ದು, ಸಂಶೋಧನೆ ಮೂಲಕ ಹೆಚ್ಚು ತಿಳಿಯಲು, ಕಲಿಯಲು ಅವಕಾಶವಿದೆ. ಸಮಾಜಕ್ಕೆ ನಿಖರವಾದ ಮಾಹಿತಿ, ಜ್ಞಾನವನ್ನು ಸಂಶೋಧನಾ ಬರಹದ ಮೂಲಕ ನೀಡುವ ಕೆಲಸವನ್ನು ವಿವಿ ಮಾಡುತ್ತಿದೆ ಎಂದರು.
ವಿದ್ಯಾರ್ಥಿ ಕಲ್ಯಾಣಾಕಾರಿ ಡಾ.ಜಿ.ಎಸ್.ಬಿರಾದರ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಂಯೋಜಕ ಡಾ.ಹನುಮಂತ ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿ ಪ್ರಾಧ್ಯಾಪಕರಾದ ಪ್ರೊ.ಪಿ.ಭಾಸ್ಕರ್, ರಾಜೇಶ, ಅನಿಲ್ ಅಪ್ರಾಳ್, ನಾಜೀಯಾ ಬೇಗಂ, ಡಿ.ಕೆ.ಬಸವರಾಜ, ನಾಗವೇಣಿ ಸರೋದೆ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.