ಬಳ್ಳಾರಿ ; ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯ, ಆವಿಷ್ಕಾರ ಹಾಗೂ ಗುಣಮಟ್ಟದ ಸಂಶೋಧನೆ ಉತ್ತೇಜಿಸಲು ವಿಶ್ವಮಟ್ಟದ ವಿವಿಯೊಂದಿಗೆ ಶೈಕ್ಷಣಿಕ ಒಡಂಬಡಿಕೆಗಳು ಮಹತ್ವವಾಗಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯ ಜೀವವಿಜ್ಞಾನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಎಸ್‌ಕೆ ವಿವಿ ಹಾಗೂ ಸ್ಯಾಂಟಿಯಾಗೊ ಡಿ ಚಿಲಿಯ ಬರ್ನಾರ್ಡೊ ಒ ಹಿಗ್ಗಿನ್ ವಿವಿಯ ಶೈಕ್ಷಣಿಕ ಒಡಂಬಡಿಕೆ ಒಪ್ಪಂದಕ್ಕೆ ಸಹಿ ಹಾಕಿ ಮಾತನಾಡಿದರು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂತರಾಷ್ಟ್ರೀಯ ವಿವಿಗಳೊಂದಿಗಿನ ಮೂರನೇ ಶೈಕ್ಷಣಿಕ ಒಡಂಬಡಿಕೆಯಾಗಿದೆ. ಗುಣಮಟ್ಟದ ಸಂಶೋಧನಾ ಲೇಖನ ಮತ್ತು ಉತ್ತಮ ಶಿಕ್ಷಣಕ್ಕೆ ಬೇಕಾದ ಅಂಶಗಳನ್ನು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಒಡಂಬಡಿಕೆಗೆ ವಿವಿ ಮುುಂದಾಗಿದೆ ಎಂದರು.
ಬರ್ನಾರ್ಡೊ ಒ ಹಿಗ್ಗಿನ್ಸ್ ವಿವಿಯ ಪ್ರೊ. ಸೀಸರ್ ಮೊರೇಲ್ಸ್ ವರ್ಡೆಜೊ ಮಾತನಾಡಿ, ಉನ್ನತ ಶಿಕ್ಷಣ ಜಗತ್ತಿನ ವಿಶ್ವವಿದ್ಯಾಲಯಗಳೊಂದಿಗೆ ಹಂಚಿಕೊಳ್ಳುವುದು ನಮ್ಮ ಉದ್ದೇಶವಾಗಿದೆ. ಬೋಧಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಇದರಿಂದ ಜಾಗತಿಕ ಮಟ್ಟದ ಸಂಶೋಧನೆಗಳಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದರು.