

ಅರಕಲಗೂಡು: ಕೃಷಿ ಕ್ಷೇತ್ರದ ಪ್ರಗತಿಪರರನ್ನು ಗುರುತಿಸಿ ನೀಡುವ ಗೌರವ ಡಾಕ್ಟರೇಟ್ ಕೃಷಿ ಸಾಧಕ ಎಂ.ಸಿ. ರಂಗಸ್ವಾಮಿ ಅವರಿಗೆ ಒಲಿದಿರುವುದು ಇಡೀ ರೈತ ಸಮುದಾಯಕ್ಕೆ ಸ್ಫೂರ್ತಿದಾಯಕ ಎಂದು ಬೆಂಗಳೂರು ಜಿಕೆವಿಕೆ ನಿವೃತ್ತ ಕುಲಪತಿ ಎಸ್.ರಾಜೇಂದ್ರಪ್ರಸಾದ್ ಬಣ್ಣಿಸಿದರು.
ಪಟ್ಟಣದಲ್ಲಿ ಶುಕ್ರವಾರ ಗೌರವ ಡಾಕ್ಟರೇಟ್ ಪುರಸ್ಕೃತ ಡಾ.ಎಂ.ಸಿ. ರಂಗಸ್ವಾಮಿ ಅವರಿಗೆ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ಕಾಯಕದಲ್ಲಿ ತೊಡಗಿಕೊಳ್ಳುವ ರೈತರು ನಿತ್ಯ ಒಂದಿಲ್ಲೊಂದು ಸಂಶೋಧನೆ ನಡೆಸುತ್ತಾರೆ. ರೈತರು ಕೈಗೊಳ್ಳುವ ಹೊಸ ಅವಿಷ್ಕಾರ, ಸಂಶೋಧನೆ, ತಂತ್ರಜ್ಞಾನ ಬಳಕೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಾಧಕ ರೈತರನ್ನು ಗುರುತಿ ಪ್ರಶಸ್ತಿ ನೀಡಲಾಗುತ್ತದೆ. ಆಧುನಿಕವಾಗಿ ಹೊಸ ತಂತ್ರಜ್ಞಾನಗಳನ್ನು ಬಳಸಿ ಕೃಷಿಯಲ್ಲಿ ಮೇರು ಮಟ್ಟದ ಸಾಧನೆ ಮಾಡಿರುವ ಡಾ.ಎಂ.ಸಿ.ರಂಗಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್ ಹುಡುಕಿಕೊಂಡು ಬಂದಿರುವುದು ಮೆಚ್ಚುಗೆ ಸಂಗತಿ ಎಂದರು.
ದೇಶದಲ್ಲಿ ಶೇ. 80ರಿಂದ 83ರಷ್ಟು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ. ಅನ್ನದಾತರು ಆರ್ಥಿಕವಾಗಿ ಸುಧಾರಣೆ ಕಾಣಬೇಕಾದರೆ ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ಧತಿಗೆ ಒತ್ತು ನೀಡಬೇಕು. ಬೆಳೆಗಳನ್ನು ಬೆಳೆಯುವ ಜತೆಗೆ ಮಾರುಕಟ್ಟೆ ಕಂಡುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.
ಬೆಂಗಳೂರು ಜಿಕೆವಿಕೆ ನಿವೃತ್ತ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, ಅವೈಜ್ಞಾನಿಕವಾಗಿ ಕೃಷಿ ನಡೆಸಿದರೆ ಉತ್ಪಾದನೆಗಿಂತ ವೆಚ್ಚವೇ ದುಪ್ಪಟ್ಟಾಗುತ್ತದೆ. ಮಧ್ಯವರ್ತಿಗಳು ರೈತರನ್ನು ಸುಲಿಗೆ ಮಾಡುವುದು ನಿಲ್ಲಬೇಕು. ಯುವಕರು ವಲಸೆ ಹೋಗುವುದನ್ನು ತಪ್ಪಿಸಿ ಕೃಷಿಯಲ್ಲಿ ತೊಡಗಿಕೊಳ್ಳದಿದ್ದರೆ ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಆಹಾರದ ಸಮಸ್ಯೆ ಭೀಕರ ಸ್ವರೂಪ ತಾಳಲಿದೆ ಎಂದು ಎಚ್ಚರಿಸಿದರು.
ಬೆಂಗಳೂರು ಐಐಎಚ್‌ಆರ್ ನಿವೃತ್ತ ಹಿರಿಯ ವಿಜ್ಞಾನಿ ಡಾ.ವಿ.ನಾರಾಯಣಸ್ವಾಮಿ ಮಾತನಾಡಿ, ಎಲ್ಲ ತಂತ್ರಜ್ಞಾನಗಳು ಎಲ್ಲ ರೈತರಿಗೂ ತಲುಪುವಂತಾದರೆ ಕೃಷಿ ಕ್ಷೇತ್ರ ಪ್ರಗತಿ ಕಾಣಲಿದೆ. ಡಾ.ರಂಗಸ್ವಾಮಿ ಅವರ ಕೃಷಿ ಸಾಧನೆ ಎಲ್ಲ ರೈತರಿಗೂ ಮಾರ್ಗದರ್ಶನವಾಗಬೇಕು ಎಂದರು.
ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಮಾತನಾಡಿ, ರೈತರು ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಮುಖ್ಯವಾಗಿ ರೈತರು ಸಂಘಟಿತರಾಗಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿವೃತ್ತ ಪ್ರಾಧ್ಯಾಪಕ ತಿಮ್ಮೇಗೌಡ ಅವರು, ಡಾ. ಎಂ.ಸಿ.ರಂಗಸ್ವಾಮಿ ಅವರ ಕೃಷಿ ಸಾಧನೆಗಳನ್ನು ವಿವರಿಸಿದರು. ಇವರ ಕೃಷಿ ಸಾಧನೆಗಳು ಪುಸ್ತಕ ರೂಪದಲ್ಲಿ ಇತರರಿಗೆ ತಲುಪುವಂತಾಗಬೇಕು ಎಂದು ಆಶಿಸಿದರು.
ನಿವೃತ್ತ ಪ್ರಾಂಶುಪಾಲ ಡಾ.ಮಾಯಣ್ಣ, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಮುಖಂಡರಾದ ಎಂ.ಟಿ.ಕೃಷ್ಣೇಗೌಡ, ಸಿ.ಡಿ.ದಿವಾಕರ್‌ಗೌಡ, ಎ.ಡಿ.ಚಂದ್ರಶೇಖರ್, ಹೆಮ್ಮಿಗೆ ಮೋಹನ್, ಶಂಕರ್, ಬಿ.ಜೆ.ರಾಮೇಗೌಡ, ಜವರೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಯೋಗಣ್ಣ ಇತರರು ಇದ್ದರು.
ವಿವಿಧ ಹೋಬಳಿಯ ಜನತೆ ಡಾ.ಎಂ.ಸಿ. ರಂಗಸ್ವಾಮಿ ಅವರಿಗೆ ನಾಡಪ್ರಭು ಕೆಂಪೇಗೌಡರ ಸ್ಮರಣಿಕೆ, ಬೆಳ್ಳಿ ಕಿರೀಟ ತೊಡಿಸಿ ಸಂಭ್ರಮಿಸಿದರು.
ಇದಕ್ಕೂ ಮುನ್ನ ಪಟ್ಟಣದ ಅನಕೃ ವೃತ್ತದಲ್ಲಿ ಡಾ. ಎಂ.ಸಿ.ರಂಗಸ್ವಾಮಿ ಅವರಿಗೆ ಕ್ರೇನ್‌ನಲ್ಲಿ ಬೃಹತ್ ಹಾರ ಹಾಕಿ ಅಲಂಕೃತ ವಾಹನದಲ್ಲಿ ವೈಭವೋಪೇತ ಮೆರವಣಿಗೆಯಲ್ಲಿ ಕರೆತರಲಾಯಿತು. ಮಂಗಳವಾದ್ಯದೊಂದಿಗೆ ಮಹಿಳೆಯರು ಕಳಸ ಹೊತ್ತು ಸಾಗಿದರು.