

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ನೇತ್ರದಾನ, ರಕ್ತದಾನದಂತೆ ಸಾವಿನ ದವಡೆಯಲ್ಲಿರುವ ವ್ಯಕ್ತಿಯ ಜೀವ ಉಳಿಸುವ ಅಂಗಾಂಗ ದಾನವೂ ಶ್ರೇಷ್ಟವಾಗಿದ್ದು, ಇಂಥ ದಾನಿಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಗಣರಾಜ್ಯೋತ್ಸವದಂದು ದಾನಿಗಳ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು. ದೇವನಹಳ್ಳಿ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಕುಟುಂಬದ ಸದಸ್ಯರನ್ನು ಸನ್ಮಾನಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ರೂಪಿಸಿದ್ದು, ಇದೊಂದು ಮಾದರಿ ಕಾರ್ಯಕ್ರಮವಾಗಿ ಗಮನ ಸೆಳೆಯಿತು.
ಜಿಲ್ಲೆಯ ಇಬ್ಬರು ದಾನಿಗಳು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಹಾಗೂ ದೊಡ್ಡಬಳ್ಳಾಪುರದ ಶ್ರೀನಿವಾಸ್ ಹಾಗೂ ಮುನಿರಾಜು ಎಂಬುವರು ಇತ್ತೀಚಿಗೆ ಮೃತಪಟ್ಟಿದ್ದರು. ಮೆದುಳು ನಿಷ್ಕ್ರಿಯಗೊಂಡು ಕೆಲವೇ ತಾಸುಗಳಲ್ಲಿ ಇವರ ಸಾವು ಖಚಿತ ಎಂಬುದನ್ನು ವೈದ್ಯರನ್ನು ದೃಢಪಡಿಸಿದ್ದರು. ಈ ವೇಳೆ ಇವರ ಕುಟುಂಬದ ಸದಸ್ಯರು ಇವರ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದ್ದರು. ಇದರಿಂದ ಸಾವಿನ ದವಡೆಯಲ್ಲಿದ್ದ ಹಲವು ಮಂದಿ ಚೇತರಿಸಿಕೊಂಡಿದ್ದಾರೆ. ಇಂಥ ಮಾನವೀಯತೆ ಮೆರೆದ ಕುಟುಂಬದ ಸದಸ್ಯರ ಮಾನವೀಯತೆ ಮೃತರ ಜೀವನದ ಸಾರ್ಥಕತೆ ಸ್ಮರಿಸುವ ಸಲುವಾಗಿ ಸದಸ್ಯರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.
ಒಬ್ಬರಿಂದ 8 ಮಂದಿಗೆ ಜೀವದಾನ: ಮೆದುಳು ನಿಷ್ಕ್ರಿಯಗೊಂಡು ಕೆಲವೇ ಗಂಟೆಗಳಲ್ಲಿ ಸಾವು ಖಚಿತವಾಗಲಿರುವ ವ್ಯಕ್ತಿಯ ಅಂಗಾಂಗಗಳು ಸಾವಿನ ದವಡೆಯಲ್ಲಿರುವ ವ್ಯಕ್ತಿಯ ಪ್ರಾಣ ಉಳಿಸಬಹುದಾಗಿದೆ. ಒಬ್ಬ ವ್ಯಕ್ತಿಯಿಂದ ಸುಮಾರು 8 ಮಂದಿಗೆ ಅಂಗಾಂಗಗಳನ್ನು ದಾನ ಮಾಡಬಹುದಾಗಿದ್ದು ಅಷ್ಟೂ ವ್ಯಕ್ತಿಗಳಿಗೆ ಜೀವದಾನ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಂಗಾಂಗ ದಾನದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಲಾಗಿದೆ. ಪ್ರತಿನಿತ್ಯ ಒಂದಿಲ್ಲೊಂದು ಅಪಘಾತಗಳು, ಅರೋಗ್ಯ ಸಂಬಂಧಿ ಕಾಯಿಲೆಗಳಿಂದ ಜೀವನ್ಮರಣ ಹೋರಾಟ ನಡೆಸುವವರಿಗೆ ಈ ಅಂಗಾಂಗಗಳು ವರವಾಗಲಿವೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಅರ್ಥಪೂರ್ಣಗೊಳ್ಳಲಿದೆ ಎಂಬುದು ಆರೋಗ್ಯಾಧಿಕಾರಿಗಳ ಅಭಿಪ್ರಾಯವಾಗಿದೆ.
ಕುಟುಂಬದವರ ಸಮ್ಮತಿ ಮುಖ್ಯ: ನೇತ್ರ ದಾನಿಗಳಂತೆ ಅಂಗಾಂಗ ದಾನಿಗಳು ಸ್ವಯಂ ನೋಂದಣಿ ಮಾಡಿಕೊಳ್ಳಬಹುದು, ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ ಹಾಗೇಯೇ ಆನ್‌ಲೈನ್‌ನಲ್ಲಿಯೂ ನೋಂದಣಿಗೆ ಅವಕಾಶವಿದೆ. ಆದರೆ ಈ ರೀತಿ ನೋಂದಣಿಯಾದ ವ್ಯಕ್ತಿಯ ಅಂಗಾಂಗ ದಾನ ಪಡೆಯಲು ಅವರ ಹತ್ತಿರದ ಕುಟುಂಬದ ಸದಸ್ಯರ ಸಮ್ಮತಿ ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಇಂಥ ಮಾನವೀಯ ಕ್ಷಣದಲ್ಲಿ ಕುಟುಂಬದವರ ಪಾತ್ರ ಮುಖ್ಯವಾಗಿದ್ದು, ಅವರನ್ನು ಸನ್ಮಾನಿಸುವ ಮೂಲಕ ಇಂಥ ಸಮಾಜಮುಖಿ ಕೆಲಸಕ್ಕೆ ಅಭಿನಂದನೆ ಸಲ್ಲಿಸುವ ಪ್ರಯತ್ನ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂಗಾಂಗ ದಾನದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಸಲುವಾಗಿ ಇಂಥ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ಅಂಗಾಂಗ ದಾನಿಗಳ ಕುಟುಂಬದ ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಕಳೆದ ಸ್ವಾತಂತ್ರ್ಯ ದಿನದಂದು ಜಿಲ್ಲೆಯ 15 ಮಂದಿಯನ್ನು ಸನ್ಮಾನಿಸಲಾಗಿತ್ತು. ಈ ಬಾರಿಯ ಗಣರಾಜ್ಯೋತ್ಸವದಂದು ಇಬ್ಬರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ