

ಲೋಕಾಪುರ: ಜಿಲ್ಲೆಯಲ್ಲಿರುವ ಏಕೈಕ ಸಹಕಾರಿ ರಂಗದ ತಿಮ್ಮಾಪುರ ಗ್ರಾಮದಲ್ಲಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸಲು ಪ್ರಾಮಾಣಿಕವಾಗಿ ಕೆಲಸ ಮಾಡುವೆ ಎಂದು ಮಾಜಿ ಸಚಿವ ಹಾಗೂ ಬೀಳಗಿ ಶುಗರ್ಸ್ ಅಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
ಸಮೀಪದ ತಿಮ್ಮಾಪುರದ ರನ್ನ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಮಂಗಳವಾರ ನಡೆದ ಷೇರುದಾರರ, ರೈತರ, ಕಾರ್ಖಾನೆ ಹಿತಚಿಂತಕರ, ಕಾರ್ಮಿಕ ಮುಖಂಡರ ಸಲಹೆ, ಸೂಚನೆ ಅಭಿಪ್ರಾಯ ಸಂಗ್ರಹಣೆ ಸಭೆಯಲ್ಲಿ ಅವರು ಮಾತನಾಡಿದರು.
ತೀವ್ರ ಆರ್ಥಿಕ ನಷ್ಟದಲ್ಲಿರುವ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾಂಭಿಸುವಂತೆ ರೈತರು ಮತ್ತು ಕಾರ್ಮಿಕರು ಸಾಕಷ್ಟು ಹೋರಾಟ ನಡೆಸಿದ್ದರಿಂದ ರೈತರ, ಷೇರುದಾರರ, ಕಾರ್ಮಿಕರ, ಕಬ್ಬು ಬೆಳೆಗಾರರ ಅನುಕೂಲಕ್ಕಾಗಿ 30 ವರ್ಷ ಲೀಸ್ ಮೇಲೆ ಆರಂಭಿಸಲು ಹಲವು ಷರತ್ತುಗಳೊಂದಿಗೆ ಸರ್ಕಾರ ಟೆಂಡರ್ ಕರೆದಿತ್ತು. ಕಾರ್ಖಾನೆ ರೂವಾರಿಗಳಾದ ಮಾಜಿ ಸಂಸದ ದಿ. ಎಸ್.ಟಿ.ಪಾಟೀಲ ಆತ್ಮಕ್ಕೆ ಶಾಂತಿ ಸಿಗಲು, ಮುಧೋಳ ತಾಲೂಕಿನ ಜನತೆಯ ಋಣ ತೀರಿಸಲು, ರೈತ ಮುಖಂಡರ, ಷೇರುದಾರರ, ಕಾರ್ಮಿಕರ ಒತ್ತಾಯದ ಮೇರೆಗೆ ನಾನು ಟೆಂಡರ್‌ನಲ್ಲಿ ಭಾಗವಹಿಸಿ ಈ ಕಾರ್ಖಾನೆಯನ್ನು ಲೀಜ್‌ನಲ್ಲಿ ಪಡೆದುಕೊಂಡಿದ್ದೇನೆ ಎಂದರು.
ಮುಖಂಡ ದಯಾನಂದ ಪಾಟೀಲ ಮಾತನಾಡಿ, ಈ ಕಾರ್ಖಾನೆ ಜತೆ ರೈತರೊಂದಿಗೆ ಭಾವನಾತ್ಮಕ ಸಂಬಂಧ ನಿಲ್ಲಬಾರದು, ಪ್ರಾರಂಭವಾಗಬೇಕೆಂಬ ಆಸಕ್ತಿ ಇದೆ. ತಾಲೂಕಿನ ರೈತ ಮುಖಂಡರು, ಕಬ್ಬು ಬೆಳೆಗಾರರು, ಕಾರ್ಮಿಕರು ಕಾರ್ಖಾನೆ ಪ್ರಾರಂಭಿಸಲು ಸಹಕಾರಿ ಧುರೀಣ ಎಸ್.ಆರ್. ಪಾಟೀಲ ಅವರ ಕೈ ಬಲಪಡಿಸಬೇಕೆಂದು ಮನವಿ ಮಾಡಿದರು.
ಜಿಪಂ ಮಾಜಿ ಉಪಾಧ್ಯಕ್ಷ ಮುತ್ತಪ್ಪ ಕೋಮಾರ ಮಾತನಾಡಿ, ಈ ಕಾರ್ಖಾನೆ ಪ್ರಾರಂಭಿಸಲು ರೈತರು ಮತ್ತು ಕಾರ್ಮಿಕರು ಸಾಕಷ್ಟು ಹೋರಾಟ ಮಾಡುತ್ತ ಬಂದಿದ್ದೇವೆ. ಕಾರ್ಖಾನೆ ಮುಚ್ಚಿಹೋಗುವ ಸಂದರ್ಭ ಆಶಾ ಕಿರಣವಾಗಿ ಬೀಳಗಿ ಶುಗರ್ಸ್ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಕಾರ್ಖಾನೆ ಪ್ರಾರಂಭಿಸಲು ಮುಂದೆ ಬಂದಿದ್ದು ಎಲ್ಲರಿಗೂ ಹರ್ಷ ತಂದಿದೆ ಎಂದು ತಿಳಿಸಿದರು.
ಸಕ್ಕರೆ ಕಾರ್ಖಾನೆ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಈರಣಗೌಡ ಪಾಟೀಲ ಮಾತನಾಡಿ, ಕಾರ್ಖಾನೆ ಬಂದಾಗಿದ್ದರಿಂದಾಗಿ ಕಾರ್ಮಿಕ ಕುಟುಂಬದವರು ಆರ್ಥಿಕ ನಷ್ಟವಾಗಿ ಬೀದಿ ಪಾಲಾಗಿದ್ದಾರೆ. ಶೀಘ್ರ ಕಾರ್ಖಾನೆ ಆರಂಭಿಸಿ ಕಾರ್ಮಿಕರ 14 ತಿಂಗಳ ರೆಗ್ಯೂಲರ್ ವೇತನ 5 ಕೋಟಿ ನೀಡಲು ಒಪ್ಪಿದ್ದಲ್ಲದೆ, ಬಾಕಿ ವೇತನವನ್ನು ಹಂತ ಹಂತವಾಗಿ ನೀಡಲಿದ್ದಾರೆ ಎಂದು ಹೇಳಿದರು.
ಮುಧೋಳ ತಾಲೂಕು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಗನಗೌಡ ಕಾತರಕಿ ಮಾತನಾಡಿ, ಬೀಳಗಿ ಶುಗರ್ಸ್ ಕಾರ್ಖಾನೆಯವರಿಗೆ ಲೀಜ್ ಮೇಲೆ ಕೊಡಲು ಷೇರುದಾರರು ವಾರ್ಷಿಕ ಸರ್ವ ಸಾಧಾರಣ ಸಭೆ ಕರೆಯಬೇಕೆಂದು ಒತ್ತಾಯಿಸಿದರು.
ಬಾಗಲಕೋಟೆ ಸಹಕಾರ ಸಂಘಗಳ ಉಪನಿಬಂಧಕರ ಮತ್ತು ವ್ಯವಸ್ಥಾಪಕ ನಿರ್ದೇಶಕ ರನ್ನ ಶುಗರ್ಸ್ ಧನಂಜಯ ಹಿರೇಮಠ ಮಾತನಾಡಿ, 15 ದಿನದೊಳಗೆ ಕಾರ್ಖಾನೆ ಷೇರುದಾರರ ವಾರ್ಷಿಕ ಸರ್ವ ಸಾಧಾರಣ ಸಭೆ ಕರೆಯಲಾಗುವುದು ಎಂದರು.
ವಿವಿಧ ಮುಖಂಡರಾದ ಜಿಪಂ ಮಾಜಿ ಅಧ್ಯಕ್ಷ ಎಲ್.ಕೆ. ಬಳಗಾನೂರ, ದಯಾನಂದ ಪಾಟೀಲ, ವಿಠ್ಠಲ ತುಮ್ಮರಮಟ್ಟಿ, ಕಾಮಣ್ಣ ಜೋಗಿ, ಧರೆಯಪ್ಪ ಸಾಂಗ್ಲೀಕರ, ಬಸವರಾಜ ಜಮಖಂಡಿ, ಅಶೋಕ ಕಿವಡಿ, ಸಂಗಣ್ಣಗೌಡ ಕಾರತಕಿ, ಮುತ್ತಪ್ಪ ಕೋಮಾರ, ಶಿವಾನಂದ ಉದಪುಡಿ, ಸಂಗಪ್ಪ ಹಂಚಿನಾಳ, ಸುಗಿರಿಯಪ್ಪ ಅಕ್ಕಿಮರಡಿ, ನ್ಯಾಯವಾದಿ ಯಲ್ಲಪ್ಪ ಹೆಗಡೆ, ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಕಬ್ಬೂರ ಮಾತನಾಡಿ, ಎಸ್.ಆರ್. ಪಾಟೀಲ ನೇತೃತ್ವದಲ್ಲೇ ಬೀಳಗಿ ಶುಗರ್ಸ್ ಕಾರ್ಖಾನೆ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.
ಬೀಳಗಿ ಶುಗರ್ಸ್ ನಿರ್ದೇಶಕರಾದ ಎಚ್.ಎಲ್. ಪಾಟೀಲ, ಸುರೇಶಗೌಡ ಪಾಟೀಲ, ರಾಹುಲ್ ನಾಡಗೌಡ, ಕಾರ್ಯಾಚರಣೆ ತಾಂತ್ರಿಕ ವಿಭಾಗಾಧಿಕಾರಿ ದಿಕ್ಷೀತ್, ಉದಯ ಸಾರವಾಡ, ಸಂಜು ನಾಯ್ಕ, ರಾಜುಗೌಡ ಪಾಟೀಲ, ರಾಜುಗೌಡ ನ್ಯಾಮಗೌಡ, ಕೆ.ಎಚ್.ಪಾಟೀಲ, ಗೀರೀಶ ಲಕ್ಷಾಣಿ, ಕಲ್ಲಪ್ಪಣ್ಣ ಸಬರದ, ದುಂಡಪ್ಪ ಲಿಂಗರಡ್ಡಿ, ಮಂಜುನಾಥಗೌಡ ಪಾಟೀಲ, ಕೆ.ಆರ್. ಮಾಚಪ್ಪನವರ, ಬಿ.ವಿ. ಹಲಕಿ, ನಾಗಪ್ಪ ಅಂಬಿ, ಗಡ್ಡೆಪ್ಪ ಬಾರಕೇರ, ರಾಜು (ನಾರಾಯಣ)ಯಡಹಳ್ಳಿ, ರುದ್ರಪ್ಪ ಅಡವಿ, ವೈ.ಜಿ. ದಾಸರಡ್ಡಿ, ರನ್ನ ಸಕ್ಕರೆ ಕಾರ್ಖಾನೆ ಷೇರುದಾರರು ಹಾಗೂ ರೈತರು, ಕಾರ್ಖಾನೆ ಕಾರ್ಮಿಕರು ಇದ್ದರು.