

ವಿರಾಜಪೇಟೆ: ಆಯುರ್ವೇದದ ಚಿಕಿತ್ಸಾ ಕ್ರಮಗಳು ಪ್ರಾಚೀನವಾದುದು. ಹಾಗಾಗಿ ಗಿಡಮೂಲಿಕೆಗಳು ಚಿಕಿತ್ಸೆಗೆ ಪೂರಕವಾಗಿ ಸ್ವಂದಿಸುತ್ತವೆ ಎಂದು ಕ್ರೆಡೋ ಆರ್ಯುವೇದ ಆಸ್ಪತ್ರೆ ವೈದ್ಯೆ ಡಾ.ರಕ್ಷಾ ಬಿ.ರೈ ಅಭಿಪ್ರಾಯಪಟ್ಟರು.
ವಿರಾಜಪೇಟೆ-ಬಿಟ್ಟಂಗಾಲ ಮುಖ್ಯ ರಸ್ತೆ ಬಳಿಯಿರುವ ಕ್ರೆಡೋ ಆರ್ಯುವೇದ ಆಸ್ಪತ್ರೆ ವತಿಯಿಂದ ಸಾರ್ವಜನಿಕರಿಗಾಗಿ ಭಾನು ವಾರ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಒಂದು ದಿನದ ಉಚಿತ ಆಯುರ್ವೇದ ಚಿಕಿತ್ಸಾ ಕ್ರಮಗಳ ಕಕ್ಕಡ ಮಾಸ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪರಿಪಕ್ವವಿಲ್ಲದೆ ಸೇವಿಸುವ ಆಹಾರ ಕ್ರಮಗಳ ಶೈಲಿಯಿಂದ ಕಾಯಿಲೆಗಳು ಜನ ಸಾಮಾನ್ಯರಲ್ಲಿ ಹೆಚ್ಚಾಗುತ್ತಿದೆ. ಆಯುರ್ವೇದ ಭಾರತೀಯ ಔಷಧ ಕ್ರಮ ಪುರಾತನವಾದುದು. ಪ್ರಕೃತಿ ಚಿಕಿತ್ಸೆ, ಸಿದ್ಧ ಯುನಾನಿ, ಪ್ರಾಚೀನ ಗಿಡಮೂಲಿಕೆಗಳನ್ನು ಬಳಸಿಕೊಂಡು ನೀಡುವ ಚಿಕಿತ್ಸಾ ಮಾದರಿಗಳನ್ನು ಆಯುರ್ವೇದದಲ್ಲಿ ಹಿರಿಯರು ಕಂಡುಕೊಂಡಿದ್ದಾರೆ. ಗಿಡಮೂಲಿಕೆಗಳಲ್ಲಿ ಔಷಧಯುಕ್ತ ಗುಣಗಳಿರು ವುದರಿಂದ ರೋಗ ಅಥವಾ ಗಾಯಗಳ ಮೇಲೆ ಪ್ರಭಾವ ಬೀರದು ಎಂದು ಹೇಳಿದರು.
ಶಿಬಿರದಲ್ಲಿ ಭಾಗಿಯಾದ ಸಾರ್ವಜನಿಕರಿಗೆ ಆಯುರ್ವೇದಿಕ್ ಕಷಾಯ ಮತ್ತು ಸೊಪ್ಪುಗಳಿಂದ ತಯಾರಿಸಿದ ಮದ್ದು ಪುಡ್ ಕಿಟ್ ನೀಡಲಾಯಿತು. ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ಮಾಡಲಾಯಿತು. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ಔಷಧಗಳನ್ನು ಶಿಬಿರಾರ್ಥಿಗಳಿಗೆ ವಿತರಿಸಲಾಯಿತು.
ಆರ್ಯುವೇದದ ವಿವಿಧ ಚಿಕಿತ್ಸಾ ಕ್ರಮ ಹಾಗೂ ಮಾಹಿತಿಯನ್ನು ಡಾ.ದೀಪ್ತಿ ಸುರೇಂದ್ರ, ಡಾ.ಸಂತೋಷ್, ಡಾ.ಅಖಿಲ ಮೊಲ್ ಜೇಮ್ಸ್ ಒದಗಿಸಿದರು. ಶಿಬಿರದಲ್ಲಿ ಕ್ರೆಡೋ ಆರ್ಯುವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಕಟ್ಟೇರ ಎಂ.ಪೂಣಚ್ಚ ಇತರರಿದ್ದರು.