ಭಾವನಾತ್ಮಕ ಹೃದಯದಿಂದ ಭಾವನೆಗಳ ಅಭಿವ್ಯಕ್ತಿ

kannada rasyostava
ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ ಬಹು ಭಾಷಾ ಕವಿ ಸಮ್ಮೇಳನವನ್ನು ಸರ್ಜಿ ಸಮೂಹಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಉದ್ಘಾಟಿಸಿದರು. ಡಿ.ಮಂಜುನಾಥ,ಎಂ.ನವೀನ್‌ಕುಮಾರ್, ಕೆ.ಎಸ್.ಮಂಜಪ್ಪ, ಜಿ.ಕುಬೇರಪ್ಪ, ಮಹಾದೇವಿ, ಲೋಕೇಶ್, ಶ್ರೀನಿವಾಸ ಇದ್ದರು.
Published on

ಶಿವಮೊಗ್ಗ: ಭಾವನಾತ್ಮಕ ಹೃದಯ ಅರಳಿದಾಗ ಮಾತ್ರ ಕಲೆ, ಸಾಹಿತ್ಯ, ಸಂಗೀತದಂತಹ ಪ್ರತಿಭೆಗಳು ಹೊರ ಹೊಮ್ಮಲು ಸಾಧ್ಯ ಎಂದು ಸರ್ಜಿ ಸಮೂಹಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.

ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಫ್ರೆಂಡ್ಸ್ ಸೆಂಟರ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ ಬಹು ಭಾಷಾ ಕವಿ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಂತ ಮನುಷ್ಯನಿಗೆ ಕಣ್ಣು, ಕಿವಿ, ಕೈ,ಕಾಲು, ಕಿಡ್ನಿ ಹೀಗೆ ಎರಡೆರಡು ಅಂಗಾಂಗಳನ್ನು ಕೊಟ್ಟಿದ್ದಾನೆ. ಆದರೆ ಹೃದಯವನ್ನು ಮಾತ್ರ ಒಂದೇ ನೀಡಿದ್ದಾನೆ. ಇಡೀ ದೇಹದಲ್ಲಿ ಹೃದಯ ಶಕ್ತಿ ಶಾಲಿ ಅಂಗ. ಈ ಹೃದಯದಲ್ಲಿ ದೈಹಿಕ ಹಾಗೂ ಭಾವನಾತ್ಮಕ ಹೃದಯ ಹೀಗೆ ಎರಡು ಹೃದಯ ಕಾಣಬಹುದು. ದೈಹಿಕ ಹೃದಯ ರಕ್ತವನ್ನು ಪಂಪ್ ಮಾಡಿದರೆ, ಭಾವನಾತ್ಮಕ ಹೃದಯ ಭಾವನೆಗಳನ್ನು ಅಭಿವ್ಯಕ್ತಿಸುತ್ತದೆ. ಅದು ಸಾಹಿತ್ಯ, ಸಂಗೀತ, ಕಲೆ ಹೀಗೆ ನಾನಾ ರೂಪದಲ್ಲಿ ಸ್ಪಂದಿಸುತ್ತದೆ. ಆಗ ಮನಸ್ಸು ಕೂಡ ಸಂತೃಪ್ತಿಯಾಗಿರುತ್ತದೆ. ಹಾಗಾಗಿ ಇರುವುದೊಂದೇ ಹೃದಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಅರ್ಜಿ ಹಾಕದೆಯೇ ಕರ್ನಾಟಕ ಸಂಘಕ್ಕೆ ಎರಡು ಬಾರಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯಿಂದ ಬಂದ ಹಣವನ್ನು ಇಡಿ ಗಂಟಾಗಿ ಇಟ್ಟು ಕನ್ನಡ ಪರ ಕಾರ್ಯಕ್ರಮಗಳ ಆಯೋಜನೆಗೆ ಬಳಸಲಾಗುವುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟ ಎಂಬ ಕವಿಯ ಆಶಯದಂತೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕುವಂತಹ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡುವ ಆಶಯದೊಂದಿಗೆ ಬಹುಭಾಷಾ ಕವಿ ಸಮ್ಮೇಳನ ರೂಪಿಸಲಾಗಿದೆ ಎಂದು ಹೇಳಿದರು.
ತೀರ್ಥಹಳ್ಳಿ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಂ.ನವೀನ್‌ಕುಮಾರ್ ಹಾಗೂ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್, ಮೆಸ್ಕಾಂನ ಕೆ.ಎಸ್. ಮಂಜಪ್ಪ, ನಿವೃತ್ತ ಮುಖ್ಯ ಶಿಕ್ಷಕ ಜಿ.ಕುಬೇರಪ್ಪ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿ, ಫ್ರೆಂಡ್ ಸೆಂಟರ್ ಅಧ್ಯಕ್ಷ ಲೋಕೇಶ್, ಸಮುದಾಯದ ಅಧ್ಯಕ್ಷ ಶ್ರೀನಿವಾಸ ಉಪಸ್ಥಿತರಿದ್ದರು.

ಬಹುಭಾಷಾ ಕವಿತೆಗಳ ವಾಚನ
ಇದೇ ವೇಳೆ ಕವಿಗಳು ತಾವು ರಚಿಸಿದ ಬಹುಭಾಷಾ ಕವನಗಳನ್ನು ವಾಚಿಸಿದರು. ಕನ್ನಡದಲ್ಲಿ ಕವನಗಳನ್ನು ಕವಿಗಳಾದ ಎಸ್.ಎಂ.ಮಣಿಕಂಠ., ವಿಜಯಲಕ್ಷ್ಮ್ಮೀ, ಅನಿತಾ ಸುಧಾಕರ್, ಎಸ್.ಕೆ.ಗಾಯತ್ರಿ, ಸಾಗರ ಸುಲೋಚನಾ, ಆರ್.ಕೆ.ಫ್ಯಾಷನ್‌ಕುಮಾರ್, ಟಿ.ಎಸ್.ಪುಷ್ಪಾವತಿ, ಕೆ.ಜಿ.ವೆಂಕಟೇಶ್, ಕೆ.ಎನ್.ರಮೇಶ್, ಡಾ. ಗಂಗಾಧರ ಪಿ.ಬನ್ನಿಹಟ್ಟಿ, ರಾಜಲಕ್ಷ್ಮೀ, ಶಂಕರ ಜಿಗಾಡೆ, ಡಾ. ಗಂಗಾಧರ ಸಾಗರ, ತುಳು ಕವನವನ್ನು ಡಾ. ಆಶಾಲತಾ, ತಮಿಳು ಕವನವನ್ನು ದೊರೆ, ಮರಾಠಿ ಕವನವನ್ನು ಚಿಕ್ಕಮಗಳೂರಿನ ಲಕ್ಷ್ಮೀ ಶಾಮರಾವ್, ತೆಲುಗು ಕವನವನ್ನು ಆರ್.ರತ್ನಯ್ಯ, ಹಿಂದಿ ಕವನವನ್ನು ಪೂರ್ಣಿಮಾ, ಇಂದಿರಾ, ಕೊಂಕಣಿ ಕವನವನ್ನು ಮಂಜುನಾಥ ಕಾಮತ್ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net