

ಮೈಸೂರು: ಬಿಜೆಪಿಯಲ್ಲಿ ಏನು ಆಗುತ್ತದೆ ಎಂಬುದನ್ನು ಸ್ವಲ್ಪ ದಿನ ಕಾಯಿರಿ. ಅಸಮಾಧಾನ ಹೇಗೆ ಸ್ಫೋಟವಾಗುತ್ತದೆ ಎಂಬುದು ಗೊತ್ತಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿ ಅಚ್ಚರಿ ಮೂಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಆಯ್ಕೆಯ ಸಭೆಯಿಂದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ್, ರಮೇಶ್ ಜಾರಕಿಹೊಳಿ ಏಕೆ ಎದ್ದು ಹೋದರು? ಬಿ.ಎಸ್.ಯಡಿಯೂರಪ್ಪ ಮಗನನ್ನು ಅಧ್ಯಕ್ಷ ಮಾಡಿರುವುದು, ಆರ್.ಅಶೋಕನನ್ನು ಪ್ರತಿಪಕ್ಷ ನಾಯಕ ಮಾಡಿರುವುದು ಅವರಿಗೆ ಬೇಸರ ತಂದಿದೆ. ಹೀಗಾಗಿ, ಸ್ವಲ್ಪ ದಿನ ನೀವೇ ಕಾದು ನೋಡಿ. ಆದರೆ, ಪ್ರತಿಪಕ್ಷದ ನಾಯಕರು ಯಾರಾದರೂ ನಮಗೆ ಅಭ್ಯಂತರವಿಲ್ಲ ಎಂದರು.
ಈಗ ಚುನಾವಣೆ ನಡೆದರೂ ಬಿಜೆಪಿ ಗೆಲ್ಲುತ್ತದೆ ಎಂಬ ಯಡಿಯೂರಪ್ಪ ಹೇಳಿಕೆಗೆ ಗರಂ ಆದ ಸಿಎಂ, ಈಗ ಏಕೆ ಚುನಾವಣೆ ನಡೆಯುತ್ತದೆ. ಹಿಂದೆಯೂ ಹೇಳುತ್ತಿದ್ದರು, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು, ಅಧಿಕಾರಕ್ಕೆ ಬಂದಿದ್ದು ಯಾರ‌್ರಿ? ಸುಮ್ಮನೆ ಏನೂ ಹೇಳುತ್ತಾರೆ, ಅದನ್ನೆಲ್ಲ ಬಿಟ್ಟು ಬಿಡಿ ಅಷ್ಟೆ ಎಂದರು.
ವಿದ್ಯುತ್ ಕದ್ದ ಎಚ್.ಡಿ.ಕುಮಾರಸ್ವಾಮಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಏನಿದೆ. ಅವರು ವಿದ್ಯುತ್ ಕದ್ದಿದ್ದು ಸತ್ಯ ತಾನೇ, ದಂಡ ಕಟ್ಟಿದ್ದು ಸತ್ಯ ತಾನೇ, ಕದ್ದಿದ್ದನ್ನು ಅವರೇ ಒಪ್ಪಿಕೊಂಡಿದ್ದು ಸತ್ಯ ತಾನೇ? ಇಂತಹವರಿಂದ ನಾವು ಏನು ಕೇಳಿಸಿಕೊಳ್ಳಬೇಕು. ಪದೇಪದೆ ಕುಮಾರಸ್ವಾಮಿ ವಿಚಾರದಲ್ಲಿ ನನಗ ಪ್ರತಿಕ್ರಿಯೆ ಕೊಡಲು ಇಷ್ಟವಿಲ್ಲ, ಎಚ್‌ಡಿಕೆ ಹತಾಶರಾಗಿದ್ದಾರೆ. ಹೀಗಾಗಿ, ಏನೇನೋ ಮಾತನಾಡುತ್ತಿದ್ದಾರೆಯಷ್ಟೇ ಎಂದು ತಿರುಗೇಟು ನೀಡಿದರು.
ದಾಖಲೆ ಇರುವ ಪೆನ್‌ಡ್ರೈವ್ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅಯ್ಯೋ ಪಾಪ. ಏನಾದರೂ ಇದ್ದರೆ ಬಿಡುಗಡೆ ಮಾಡಬೇಕು ತಾನೇ? ಅದನ್ನು ಏಕೆ ಇಟ್ಟುಕೊಂಡಿದ್ದಾರೆ? ಅದು ಇದ್ದ ಮೇಲೆ ಬಿಡುಗಡೆ ಮಾಡಲು ಏನು? ಆರೋಪ ಮಾಡಿದ ನಂತರ ಅಧಿವೇಶನ ನಡೆದಿತ್ತು. ಅಲ್ಲೇ ಪೆನ್‌ಡ್ರೈವ್ ಬಿಡುಗಡೆ ಮಾಡಬಹುದಿತ್ತಲ್ವೇ? ಏಕೆ ಮಾಡಲಿಲ್ಲ ಎಂದು ಕುಟುಕಿದರು.
ಕುಮಾರಸ್ವಾಮಿ ಮಾಡಿದ ಆರೋಪ ಒಂದನ್ನೂ ಸಾಬೀತು ಮಾಡಿಲ್ಲ. ಅವರಿಗೆ ಬರೀ ದ್ವೇಷ, ಅಸೂಯೆ, ಹೊಟ್ಟೆಉರಿ, ಹೊಟ್ಟೆ ಕಿಚ್ಚು. ಅವರ ಪಂಚರತ್ನ ಏನಾಯ್ತು ? ಜೆಡಿಎಸ್ ಶಾಸಕರ ಸಂಖ್ಯೆ 38ರಿಂದ 19ಕ್ಕೆ ಏಕೆ ಇಳಿಯಿತು? ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ಕೊಟ್ಟರು.
ಡಾ.ಯತೀಂದ್ರ ಸಿದ್ದರಾಮಯ್ಯ ವಿಡಿಯೋದಲ್ಲಿರುವ ವಿವೇಕಾನಂದ ಬಗ್ಗೆ ಸ್ಪಷ್ಟನೆ ಕೊಟ್ಟ ಸಿಎಂ, ಪೊಲೀಸ್ ಇನ್ಸ್‌ಪೆಕ್ಟರ್ ವರ್ಗಾವಣೆಯಲ್ಲಿರುವ ವಿವೇಕಾನಂದ ಹೆಸರು, ಯತೀಂದ್ರ ವೈರಲ್ ವಿಡಿಯೋದಲ್ಲಿ ಉಲ್ಲೇಖವಾಗಿದ್ದ ವಿವೇಕಾನಂದ ಹೆಸರು ಬೇರೆ ಬೇರೆ. ಅವರು ಇನ್ಸ್‌ಪೆಕ್ಟರ್, ಇವರು ಬಿಇಒ. ಬಿಇಒ ನಮ್ಮ ಕ್ಷೇತ್ರದವರು. ಈಗ ವರ್ಗಾವಣೆ ಆಗಿರುವ ಇನ್ಸ್‌ಪೆಕ್ಟರ್ ಚಾಮರಾಜ ಕ್ಷೇತ್ರದವರು. ಯಾರು ವರ್ಗಾವಣೆ ಮಾಡಿಸಿಕೊಂಡರು ಎಂಬುದನ್ನು ಸ್ಥಳೀಯ ಶಾಸಕರನ್ನು ಕೇಳಿ ಎಂದು ಹೇಳಿದರು.
ಬಿಜೆಪಿಯವರು ಸರ್ಕಾರದ ವಿರುದ್ಧ ಮಾಡುತ್ತಿರುವ ಭ್ರಷ್ಟಾಚಾರದ ಆರೋಪಗಳಿಗೆ ಮುಂಬರುವ ವಿಧಾನಸಭೆ ಅಧಿವೇಶನದಲ್ಲೇ ಉತ್ತರ ನೀಡಲಾಗುವುದು ಎಂದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ಪೋಸ್ಟರ್ ಚಳವಳಿ ಪ್ರಾರಂಭಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜನ ಬಿಜೆಪಿಯವರಿಗೆ ತಕ್ಕಪಾಠ ಕಲಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಕನಸು ಕಂಡಿದ್ದರು. ಆದರೆ, ಜನ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿರುವುದು ಅವರನ್ನು ಆತಂಕಕ್ಕೆ ದೂಡಿದ್ದು, ಇದರಿಂದ ಅರ್ಥವಿಲ್ಲದ ಕಾರ್ಯ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಅವಧಿ ಮುಗಿದಿರುವ ಮೈಸೂರು ಪಾಲಿಕೆಗೆ ಚುನಾವಣೆ ನಡೆಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.