ಅಧಿಕಾರ ಗಿಟ್ಟಿಸಿಕೊಳ್ಳಲು ಕಸರತ್ತು

ಚಿಕ್ಕಬಳ್ಳಾಪುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್​ ಮತ್ತು ಉಪಾಧ್ಯಕ್ಷೆ ಶೈಲಜಾ ನಾಗೇಶ್​ರೊಂದಿಗೆ ಮಾಜಿ ಸಚಿವ ಡಾ ಕೆ.ಸುಧಾಕರ್​, ಕೋಚಿಮುಲ್​ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್​ ಮತ್ತಿತರರು ಇದ್ದರು.
Gramapanchayati Adhikara Gadi Gittisikollalu kasarattu
Published on


ಉಲ್ಟಾ ಪಲ್ಟಾ ಆಗುತ್ತಿದೆ ಲೆಕ್ಕಾಚಾರ : ಸುಧಾಕರ್​ ತವರಲ್ಲಿ ಕೈಗೆ ಜಯ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಎರಡನೇ ಅವಧಿಯ ಚುನಾವಣೆಯ ಸಂದರ್ಭದಲ್ಲಿ ಶತಾಯ ಗತಾಯ ಅಧಿಕಾರವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಪೂರಕವಾದ ಕಸರತ್ತುಗಳಿಗೆ ನಾನಾ ಲೆಕ್ಕಾಚಾರಗಳು ಉಲ್ಟಾ ಪಲ್ಟಾ ಹೊಡೆಯುತ್ತಿವೆ.
ಸ್ವತ@ ಚಿಕ್ಕಪ್ಪ ಪಿ.ಎನ್​.ರವೀಂದ್ರರೆಡ್ಡಿ ಮತ್ತು ಬೆಂಬಲಿತ ಸದಸ್ಯರು ಕೈ ಕೊಟ್ಟ ಹಿನ್ನೆಲೆಯಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್​ ಹುಟ್ಟೂರು ಪೆರೇಸಂದ್ರ ಗ್ರಾಪಂನಲ್ಲಿಯೇ ಕಾಂಗ್ರೆಸ್​ ಬೆಂಬಲಿತರು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಅವಧಿಯಲ್ಲಿ 19 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ಸ್ವಪಕ್ಷೀಯರನ್ನು ಗಾದಿ ಮೇಲೆ ಕೂರಿಸಿದ್ದರು. ಆದರೆ, ಈ ಬಾರಿ ಎರಡು ಗುಂಪುಗಳಾಗಿ ವಿಭಜನೆಯಾಗಿದ್ದು, ಕಾಂಗ್ರೆಸ್​ ಬೆಂಬಲದೊಂದಿಗೆ ಒಂದು ಗುಂಪು ಗೆಲುವು ಸಾಧಿಸಿದೆ.

ಪೆರೇಸಂದ್ರ ಚುನಾವಣೆ:
ಪೆರೇಸಂದ್ರದಲ್ಲಿ ಗ್ರಾಪಂನಲ್ಲಿ 20 ಸದಸ್ಯರಿದ್ದಾರೆ. ಈ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ.ಗಂಗರತ್ನಮ್ಮ11 ಮತಗಳು ಮತ್ತು ಬಿ.ಗಂಗರತ್ನಮ್ಮ 9 ಮತಗಳು ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಕೆ.ವೆಂಕಟಪತಿ 13 ಮತಗಳು ಮತ್ತು ಪಿ.ಎಲ್​.ಆನಂದ್​ 7 ಮತಗಳನ್ನು ಪಡೆದಿದ್ದಾರೆ. ಚುನಾವಣಾಧಿಕಾರಿಯಾಗಿ ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ ಕಾರ್ಯ ನಿರ್ವಹಿಸಿದರು. ಮೊದಲಿನಿಂದಲೂ ಸುಧಾಕರ್​ ವಿರುದ್ಧ ಮುನಿಸಿಕೊಂಡಿರುವ ಅವರ ಚಿಕ್ಕಪ್ಪ ಪಿ.ಎನ್​.ರವೀಂದ್ರರೆಡ್ಡಿ ಮತ್ತು ಕಾಂಗ್ರೆಸ್​ ಬೆಂಬಲಿಗರು ಒಪ್ಪಂದ ಮಾಡಿಕೊಂಡಿದ್ದು, ಈ ಬಣವು ಹೆಚ್ಚಿನ ಮತಗಳೊಂದಿಗೆ ಅಧಿಕಾರದ ಗದ್ದುಗೆ ಹಿಡಿದಿದೆ. ಇದರಿಂದ ಮಾಜಿ ಸಚಿವರು ಮುಖಭಂಗ ಅನುಭವಿಸುವಂತಾಗಿದೆ.

ಅಂಗರೇಖನಹಳ್ಳಿಯಲ್ಲಿ ಆಣೆ ಗಲಾಟೆ:
ಇತ್ತೀಚೆಗೆ ನಡೆದ ಅಂಗರೇಖನಹಳ್ಳಿ ಗ್ರಾಪಂ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು, ಜೆಡಿಎಸ್​ಗೆ ಕೈ ಕೊಟ್ಟಿವೆ. ಮೊದಲ ಅವಧಿಯಲ್ಲಿ ಜಂಟಿಯಾಗಿರಲು ಆಣೆ ಪ್ರಮಾಣ ಮಾಡಿ, ಇದೀಗ ಅಧಿಕಾರಕ್ಕಾಗಿ ಕಾಂಗ್ರೆಸ್​ ವಂಚಿಸಿದೆ ಎಂದು ಜೆಡಿಎಸ್​ ಮುಖಂಡ ಅಂಗರೇಖನಹಳ್ಳಿ ರವಿಕುಮಾರ್​ ಸೇರಿದಂತೆ ಮತ್ತಿತರರು ಆರೋಪಿಸಿದ್ದು ಚುನಾವಣಾ ಕೇಂದ್ರದ ಮುಂಭಾಗದ ರಸ್ತೆಯಲ್ಲಿ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ:
ತಾಲೂಕಿನ ದೊಡ್ಡಮರಳಿ ಗ್ರಾ.ಪಂ.ಅಧ್ಯಕ್ಷರಾಗಿ ನಾಗವೇಣಿ ಮತ್ತು ಉಪಾಧ್ಯಕ್ಷರಾಗಿ ರತ್ನಮ್ಮ, ಹಾರೋಬಂಡೆ ಗ್ರಾಪಂ ಅಧ್ಯಕ್ಷರಾಗಿ ಮಂಜುಳಾ ಗೋವಿಂದಪ್ಪ, ಉಪಾಧ್ಯಕ್ಷರಾಗಿ ಸಿಂಧು ಮನೋಹರ್​, ತಿಪ್ಪೇನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಶ್ರೀನಿವಾಸ್​ ಮತ್ತು ಉಪಾಧ್ಯಕ್ಷರಾಗಿ ಶೈಲಜಾ ನಾಗೇಶ್​, ಮಂಚನಬಲೆ ಗ್ರಾಪಂ ಅಧ್ಯಕ್ಷರಾಗಿ ಮಂಚನಬಲೆ ಶ್ರೀಧರ್​ ಮತ್ತು ಉಪಾಧ್ಯಕ್ಷರಾಗಿ ನೇತ್ರ, ಹಳೇಹಳ್ಳಿ ಗ್ರಾ.ಪಂ.ಅಧ್ಯಕ್ಷರಾಗಿ ಗಂಗಮ್ಮ ವೆಂಕಟಪತಿ ಮತ್ತು ಉಪಾಧ್ಯಕ್ಷರಾಗಿ ಗೀತಾ ರವಿ, ಅಜ್ಜವಾರ ಗ್ರಾಪಂ ಅಧ್ಯಕ್ಷರಾಗಿ ದೇವೇಂದ್ರ, ಉಪಾಧ್ಯಕ್ಷರಾಗಿ ಧನುಷ್​ ಗೌಡ ಆಯ್ಕೆಯಾಗಿದ್ದಾರೆ.

ಗಾದಿಗಾಗಿ ಕಸರತ್ತು:
ಈಗಾಗಲೇ ಗ್ರಾಪಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ, ಚುನಾವಣಾ ನಿಗದಿ ಪ್ರಕ್ರಿಯೆ ಮುಗಿದಿದೆ. ಇದರಿಂದ ಆಯಾ ವ್ಯಾಪ್ತಿಯಲ್ಲಿ ಬೆಂಬಲಿತ ಸದಸ್ಯರನ್ನು ಸೆಳೆದುಕೊಂಡು ಪ್ರಾಬಲ್ಯ ಮೆರೆಯಲು ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಪೈಪೋಟಿ ಉಂಟಾಗಿದೆ. ಇದರ ನಡುವೆ ಜೆಡಿಎಸ್​ ಮಂಕಾಗಿದೆ.


ರಾಜಕೀಯ ಇಲ್ಲ, ಅಧಿಕಾರ:
ಗ್ರಾಪಂ ಸದಸ್ಯರು ಯಾವುದೇ ರಾಜಕೀಯ ಪಕ್ಷದ ಚಿಹ್ನೆಯಡಿ ಆಯ್ಕೆಯಾಗುವುದಿಲ್ಲ. ಇಲ್ಲಿ ಪಕ್ಷಾತಿತವಾಗಿ ಚುನಾವಣೆ ಎದುರಿಸಬೇಕಾಗುತ್ತದೆ. ಇದರ ನಡುವೆ ಬಹುತೇಕ ಸದಸ್ಯರು ಆಯಾ ವ್ಯಾಪ್ತಿಯಲ್ಲಿನ ರಾಜಕೀಯ ನಾಯಕರ ಬಣದಲ್ಲಿದ್ದಾರೆ. ಆದರೂ ಚುನಾವಣೆಯ ಸಂದರ್ಭದಲ್ಲಿ ಅಧಿಕಾರದ ಲಾಭವನ್ನು ಮಾತ್ರ ನೋಡುತ್ತಿದ್ದು ಪಕ್ಷ ನಿಷ್ಠೆಯನ್ನು ಬದಿಗೊತ್ತಿದ್ದಾರೆ. ಇದರ ನಡುವೆ ಶಾಸಕರು ಮತ್ತು ಮಾಜಿ ಶಾಸಕರು ಗ್ರಾಪಂ ಹಿಡಿತವನ್ನು ಹೊಂದಿರುವುದನ್ನು ಬಿಂಬಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿನ 157 ಗ್ರಾಪಂಗಳ ವ್ಯಾಪ್ತಿಯಲ್ಲಿ 2390 ಸದಸ್ಯರಿದ್ದಾರೆ. ಮೊದಲ ಅವಧಿಯ ಬಳಿಕ ಇದೀಗ ಎರಡನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ನಡೆಯುತ್ತಿದೆ. ಇದಕ್ಕೆ ಆಯಾ ವ್ಯಾಪ್ತಿಯಲ್ಲಿ ಒಲವು ಗಳಿಕೆ ಚರ್ಚೆಯ ಸಭೆಗಳು ಬಿರುಸಿನಿಂದ ನಡೆಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net