ಮೈನವಿರೇಳಿಸಿದ ಕುಸ್ತಿ ಪಂದ್ಯಾವಳಿ

31 BIRUR 01
ಬೀರೂರಿನ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಆಯೋಜಿಸಿರುವ ರಾಜ್ಯ ಮಟ್ಟದ ಹೊನಲು ಬೆಳಕಿನ ಬಯಲು ಕುಸ್ತಿ ಪಂದ್ಯಾವಳಿಗಳಿಗೆ ಪಿಎಸ್‌ಐ ಸಜಿತ್ ಕುಮಾರ್ ಚಾಲನೆ ನೀಡಿದರು. ಬಿ.ಕೆ.ಶಶಿಧರ್, ಗುರು ಇತರರಿದ್ದರು.
Published on

ಬೀರೂರು: ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಶಿವಾಜಿ ವ್ಯಾಯಾಮ ಶಾಲೆ ಸೇವಾ ಸಂಘ ಹಾಗೂ ಪುರಸಭೆ ಆಶ್ರಯದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಬಯಲು ಕುಸ್ತಿ ಪಂದ್ಯಾವಳಿಗೆ ಶುಕ್ರವಾರ ರಾತ್ರಿ ಅಖಾಡದ ಪೂಜೆಯೊಂದಿಗೆ ವಿಧ್ಯುಕ್ತ ಚಾಲನೆ ದೊರೆಯಿತು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಮೈದಾನದಲ್ಲಿ ಶನಿವಾರ ಸಂಜೆ ಅಖಾಡದಲ್ಲಿ ಪೈಲ್ವಾನರು ಎದುರಾಳಿಗಳನ್ನು ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ, ಶಿಳ್ಳೆ ಹಾಕಿ ಚಪ್ಪಾಳೆ ತಟ್ಟುತ್ತಾ ಹುರಿದುಂಬಿಸುತ್ತಿದ್ದರು. ನೆಚ್ಚಿನ ಪೈಲ್ವಾನರು ನೆಲಕ್ಕುರುಳಿದಾಗ ಅಯ್ಯೋ ಎಂದು ಉದ್ಗಾರ ತೆಗೆಯುತ್ತಿದ್ದರು. ಮೈನವಿರೇಳಿಸುವಂತಿದ್ದ ಪಂದ್ಯಗಳು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಭಾನುವಾರ ರಾತ್ರಿ ಅಂತಿಮ ಹಣಾಹಣಿ ನಡೆಯಲಿದ್ದು, ವಿಜೇತರು ಯಾರಾಗುತ್ತಾರೆ ಎಂಬ ಕುತೂಹಲ ಸ್ಥಳೀಯರನ್ನು ಕಾಡುತ್ತಿದೆ.
ವಿಜೇತರಿಗೆ ಬೆಳ್ಳಿ ಗದೆ, ಬಂಗಾರದ ಪದಕ, ಬೆಳ್ಳಿಯ ಟ್ರೋಫಿ ಸೇರಿದಂತೆ ನಗದು ಬಹುಮಾನದ ಜತೆಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತದೆ. ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಕುಸ್ತಿಪಟುಗಳು ಆಗಮಿಸಿದ್ದಾರೆ. ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಮೈಸೂರು, ಧಾರವಾಡ ಮಾತ್ರವಲ್ಲದೆ ದೆಹಲಿ, ಹರಿಯಾಣದಿಂದಲೂ 150ಕ್ಕೂ ಅಧಿಕ ಪೈಲ್ವಾನರು ಆಗಮಿಸಿದ್ದು, ಪಂದ್ಯಾವಳಿಗೆ ಮೆರಗು ನೀಡಿದ್ದಾರೆ.
ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಪಿಎಸ್‌ಐ ಸಜಿತ್ ಕುಮಾರ್, ಪೈಲ್ವಾನರಾದ ಗುರು, ಪುನಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net