ರೋಚಕವಾಗಿ ನಡೆದ ನಾಡ ಕುಸ್ತಿ ಪಂದ್ಯಾವಳಿ

mysore
Published on

ಮೈಸೂರು: ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ನಾಡ ಕುಸ್ತಿ ರಂಗೇರಿತ್ತು. ಕುತೂಹಲ, ಹಣಾಹಣಿಯಿಂದ ಕೂಡಿದ್ದ ಜಟ್ಟಿಗಳ ಸೆಣಸಾಟ ಕುಸ್ತಿ ಪ್ರಿಯರಲ್ಲಿ ಉತ್ಸಾಹವನ್ನು ಇಮ್ಮಡಿಗೊಳಿಸಿತು.


ಜಿಲ್ಲಾ ಕುಸ್ತಿ ಸಂಘ ಆಯೋಜಿಸಿದ್ದ 25 ಜೊತೆ ಕಾಟಾ ಕುಸ್ತಿ ಕಾದಾಟ ತುರುಸಿನಿಂದ ಕೂಡಿತ್ತು. ಮೊದಲಿಗೆ 18 ವರ್ಷದೊಳಗಿನ ಬನ್ನೂರಿನ ರೋಚನ್ ಹಾಗೂ ಚಾಮುಂಡಿ ಕ್ರೀಡಾಂಗಣದ ಧೀರಜ್ ನಡುವೆ ಪಂದ್ಯ ನಡೆಯಿತು.

ಉಭಯ ಪೈಲ್ವಾನರು ಪಟ್ಟಿಗೆ ಪ್ರತಿ ಪಟ್ಟು ಹಾಕಿ ಕೆರಳಿಸಿದರು. ಕೊನೆಯಲ್ಲಿ ಧೀರಜ್ ಜಯಶಾಲಿಯಾದರು. ಕೆ.ಜಿ.ಕೊಪ್ಪಲಿನ ಅಪ್ಪು ಹಾಗೂ ಪಡುವಾರಹಳ್ಳಿಯ ಚಿರಂತ್ ನಡುವಿನ ಕಾದಾಟವೂ ಗಮನ ಸೆಳೆಯಿತು. ರೋಚಕವಾಗಿ ನಡೆದ ಪಂದ್ಯದಲ್ಲಿ ಅಂತಿಮವಾಗಿ ಚಿರಂತ್ ಮೇಲುಗೈ ಸಾಧಿಸಿದರು.


ಪಾಂಡವಪುರದ ಗುರು ಹಾಗೂ ಕ್ಯಾತಮಾರನಹಳ್ಳಿಯ ರಕ್ಷಿತ್ ನಡುವೆ 10 ನಿಮಿಷಗಳ ಕಾದಾಟ ನಡೆದು ಸಮಬಲ ಸಾಧಿಸಿದರು. ಇದರಿಂದ ಇಬ್ಬರಿಗೂ ವಿಜಯಲಕ್ಷ್ಮೀ ಒಲಿಯಲಿಲ್ಲ. ಹೀಗೆ 30 ಜೋಡಿಗಳ ನಡುವೆ ನಡೆದ ಪಂದ್ಯಗಳು ಕುಸ್ತಿ ಪ್ರೇಮಿಗಳಿಗೆ ಉತ್ತಮ ರಂಜನೆಯನ್ನು ನೀಡಿದವು.
ಸಂಸದ ಪ್ರತಾಪಸಿಂಹ ಪಂದ್ಯಾವಳಿಗೆ ಚಾಲನೆ ನೀಡಿದರು.

ಶಾಸಕ ಎಸ್.ಟಿ.ಶ್ರೀವತ್ಸ, ಮಾಜಿ ಎಂಎಲ್‌ಸಿ ಸಂದೇಶ್ ನಾಗರಾಜ್, ಕಾಂಗ್ರೆಸ್ ಮುಖಂಡ ಧ್ರುವಕುಮಾರ್, ಕುಸ್ತಿ ಸಂಘದ ಅಧ್ಯಕ್ಷ ಪೈಲ್ವಾನ್ ಚಂದ್ರಶೇಖರ್, ನಿವೃತ್ತ ಅಧಿಕಾರಿ ರಾಮಚಂದ್ರಪ್ಪ, ಅಂತಾರಾಷ್ಟ್ರೀಯ ಕುಸ್ತಿಪಟು ಪೈ. ಉತ್ತಮ್ ಕದಂ, ಪೈ. ಕೇದಾರ್‌ನಾಥ್, ಪೈ. ಸ್ಟ್ರಿಂಗ್ ಇಕ್ಬಾಲ್, ಸಂಘದ ಪದಾಧಿಕಾರಿಗಳಾದ ಸ್ಟಾರ್ ವೆಂಕಟೇಶ್, ಬಸವರಾಜು, ರವಿಶಂಕರ್, ಪ್ರಸನ್ನರಾಜು, ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net