ಕೊಡವ ನಮ್ಮೆ ಯಲ್ಲಿ ರೋಚಕ ಹಾಕಿ ಪಂದ್ಯಾವಳಿ

19adarshkdga3
Published on

ಮಡಿಕೇರಿ: ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ೮ನೇ ವರ್ಷದ ಕೊಡವ ನಮ್ಮೆ ಯ ಎರಡನೇ ದಿನ ಕೊಡವ ಸಮಾಜಗಳ ನಡುವೆ ರೋಚಕ ಹಾಕಿ ಪಂದ್ಯಾವಳಿ ನಡೆಯಿತು.


ಕೊಡವ ಸಮಾಜಗಳ ಒಕ್ಕೂಟದ ಮೈದಾನದಲ್ಲಿ ವಿರಾಜಪೇಟೆ ಹಾಗೂ ಮೂರ್ನಾಡು ತಂಡಗಳ ನಡುವೆ ಮೊದಲ ನಾಕೌಟ್ ಮಾದರಿಯ ಪಂದ್ಯಾವಳಿ ನಡೆದು, ಎರಡು ತಂಡಗಳು ಯಾವುದೇ ಗೋಲು ಪಡೆಯದ ಕಾರಣ ಟೈ ಬ್ರೆಕರ್‌ನಲ್ಲಿ ೩-೨ ಗೋಲುಗಳ ಅಂತರದಲ್ಲಿ ಮೂರ್ನಾಡು ತಂಡ ಜಯಗಳಿಸಿ ರೌಂಡ್ ರಾಬಿನ್ ಸುತ್ತು ಪ್ರವೇಶಿಸಿತು.


ಮಡಿಕೇರಿ ಹಾಗೂ ಹುದಿಕೇರಿ ತಂಡಗಳ ನಡುವೆ ನಡೆದ ಮೊದಲ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಹುದಿಕೇರಿ ತಂಡದ ವಿರುದ್ಧ ೨-೧ ಗೋಲಿನ ಅಂತರದಲ್ಲಿ ಮಡಿಕೇರಿ ತಂಡ ಜಯಗಳಿಸಿತು. ಎರಡನೇ ರೌಂಡ್ ರಾಬಿನ್ ಪಂದದಲ್ಲಿ ಶ್ರೀಮಂಗಲ ಹಾಗೂ ಮೂರ್ನಾಡು ತಂಡಗಳ ನಡುವೆ ಪೈಪೋಟಿ ನಡೆದಿದ್ದು, ಎರಡು ತಂಡಗಳು ಯಾವುದೇ ಗೋಲು ದಾಖಲಿಸದ ಕಾರಣ ಎರಡು ತಂಡಗಳಿಗೆ ತಲಾ ಒಂದು ಅಂಕವನ್ನು ನೀಡಲಾಯಿತು.


ಗಮನ ಸೆಳೆದ ಹಗ್ಗಜಗ್ಗಾಟ: ಬೊಳಿಯಂಗಡ ದಾದು ಪೂವಯ್ಯರವರ ನೇತೃತ್ವದಲ್ಲಿ ಪುರುಷರು ಹಾಗೂ ಮಹಿಳೆಯರ ವಿಭಾಗದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆ ಗಮನ ಸೆಳೆಯಿತು. ಪುರುಷರ ವಿಭಾಗದ ಸ್ಪರ್ಧೆಯಲ್ಲಿ ತಲಾ ಏಳು ಕೊಡವ ಸಮಾಜಗಳ ನಡುವೆ ನಡೆದ ಪೈಪೋಟಿಯಲ್ಲಿ ಅಮ್ಮತ್ತಿ ಮತ್ತು ನಾಪೋಕ್ಲು ತಂಡ ಕೊನೆ ಹಂತಕ್ಕೆ ಪ್ರವೇಶಿಸಿದೆ. ಮಹಿಳೆಯರ ವಿಭಾಗದಲ್ಲಿ ಏಳು ತಂಡಗಳು ಪಾಲ್ಗೊಂಡಿದ್ದು, ಮಡಿಕೇರಿ ಹಾಗೂ ನಾಪೋಕ್ಲು ಕೊಡವ ಸಮಾಜಗಳ ನಡುವೆ ಅಂತಿಮ ಪಂದ್ಯಾವಳಿ ಮತ್ತು ಇಂದು(ನ೨೦ಕ್ಕೆ) ಪುರುಷರ ಹಾಗೂ ಮಹಿಳೆಯರ ಅಂತಿಮ ಪಂದ್ಯಾವಳಿ ನಡೆಯಲಿದೆ.


ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ: ಕಬ್ಬಚ್ಚಿರ ಶರತ್‌ರವರ ನೇತೃತ್ವದಲ್ಲಿ ನಡೆದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ವಿವಿಧ ಕೊಡವ ಸಮಾಜದ ಅಧ್ಯಕ್ಷರು ಪಾಲ್ಗೊಂಡಿದ್ದರು.


ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಡುವಂಡ ಮುತ್ತಪ್ಪ ಪ್ರಥಮ ರೂ೫ ಸಾವಿರ, ಬಡುವಂಡ ದೇವಯ್ಯ ದ್ವಿತೀಯ ರೂ.೩ ಸಾವಿರ ಹಾಗೂ ಪುತ್ತರಿರ ಕಾರ್ತಿಕ್ ಕಾರ್ಯಪ್ಪ ತೃತೀಯ ರೂ.೨ ಸಾವಿರ ಬಹುಮಾನ ಪಡೆದುಕೊಂಡರು. ಜತೆಗೆ ದಾನಿಗಳಾದ ಅಪ್ಪುಮಣಿಯಂಡ ಸನ್ನು ಹಾಗೂ ಡೆಸ್ಸಿ ದಂಪತಿಗಳು ನೀಡಿದ ಆಕರ್ಷಕ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net