ಪೊಲೀಸ್​ ಇಲಾಖೆ ನಿಷ್ಕ್ರಿಯತೆಗೆ ನಿದರ್ಶನ

15 vikram 11 (Aravind bellad)
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹುಬ್ಬಳ್ಳಿಯಲ್ಲಿ ನಡೆದ ಅಂಜಲಿ ಅಂಬಿಗೇರ ಯುವತಿ ಕೊಲೆ ಪ್ರಕರಣ ಪೊಲೀಸ್​ ಇಲಾಖೆ ನಿಷ್ಕ್ರಿಯತೆಗೆ ನಿದರ್ಶನವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ದೂರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೆಲ ದಿನಗಗಳ ಹಿಂದಷ್ಟೇ ನೇಹಾ ಹಿರೇಮಠರ ಭೀಕರ ಹತ್ಯೆ ಪ್ರಕರಣ ನಡೆದಿತ್ತು. ಇದೀಗ ಅಂಜಲಿ ಅಂಬಿಗೇರ ಕೊಲೆ ನಡೆದಿದೆ. ಇದರಿಂದ ಹೆಣ್ಣು ಹೆತ್ತವರು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾಭ್ಯಾಸ, ಉದ್ಯೋಗಗಳಿಗೆ ಹೆಣ್ಣು ಮಕ್ಕಳನ್ನು ಕಳಿಸಲು ಹಿಂಜರಿಯುವಂತಾಗಿದೆ. ಹು&ಧಾ ಅವಳಿನಗರದಲ್ಲಿ ನಡೆಯುತ್ತಿರುವ ಯುವತಿಯರ ಕೊಲೆ ಪ್ರಕರಣಗಳಲ್ಲಿ ಪೊಲೀಸ್​ ಇಲಾಖೆ ವೈಲ್ಯ ಎದ್ದು ಕಾಣುತ್ತಿದೆ. ನಗರದಲ್ಲಿ ಸಮಾಜ ಘಾತುಕ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಪೊಲೀಸರು ನಿಯಂತ್ರಿಸಲು ಆಸಕ್ತಿ ತೋರಿಸುತ್ತಿಲ್ಲ.
ಶಾಲೆ&ಕಾಲೇಜು, ಮಹಿಳಾ ಉದ್ಯೋಗಿಗಳ ಸ್ಥಳಗಳಲ್ಲಿ ಪೊಲೀಸರು ಕಾಣಿಸಿಕೊಂಡರೆ ಕೆಲ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯ. ಆದರೆ ಪೊಲೀಸರು ಈ ಕೆಲಸ ಮಾಡುತ್ತಿಲ್ಲ. ಇನ್ನೊಂದೆಡೆ ಪೊಲೀಸ್​ ಠಾಣೆಗಳಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವವರು ಕಾಣಿಸಿಕೊಳ್ಳುತ್ತಿರುವುದು ಜನರಲ್ಲಿ ಪೊಲೀಸರ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುವಂತಾಗಿದೆ. ಕಾನೂನು ಉಲ್ಲಂಘಿಸುವವರಿಗೆ ಯಾವುದೇ ಭೀತಿ ಇಲ್ಲದಂತಾಗಿದೆ.
ಅವಳಿ ನಗರದಲ್ಲಿ ಕಾನೂನು ಮೀರಿ ವತಿರ್ಸುವವರ ಕೃತ್ಯಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ. ಪೊಲೀಸ್​ ಇಲಾಖೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಸಮಾಜ ಘಾತುಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಜನರು ನಿರ್ಭೀತಿಯಿಂದ ಜೀವಿಸುವ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕು ಎಂದು ಬೆಲ್ಲದ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net