ಸರ್ವಜನಾಂಗದ ಶಾಂತಿಯ ತೋಟಕ್ಕೆ ನಿದರ್ಶನ

IMG_3341
ನಾಗಮಂಗಲ ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸಿದರು. ನಯೀಂಉನ್ನಿಸಾ, ಚಂದ್ರಮೌಳಿ ಇದ್ದರು.
Published on

ನಾಗಮಂಗಲ: ನಾಡಪ್ರಭು ಕೆಂಪೇಗೌಡರು ಯಾವುದೇ ಒಂದು ಜಾತಿ, ಜನಾಂಗಕ್ಕೆ ಸೀಮಿತವಾಗದೆ ಸರ್ವಜನಾಂಗದ ಶಾಂತಿಯ ತೋಟದಂತೆ ಆಡಳಿತ ನಡೆಸಿದರು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.


ಪಟ್ಟಣದ ಪುರಸಭೆಯ ಸೂಪರ್ ಮಾರ್ಕೆಟ್ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಭಾನುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಅಂದಿನ ಬೆಂದಕಾಳೂರು ಇಂದು ವಿಶ್ವದಲ್ಲಿಯೇ ಖ್ಯಾತಿ ಪಡೆದಿದೆ ಎಂದರೆ ಅಂದು ಕೆಂಪೇಗೌಡರು ದೂರದೃಷ್ಟಿಯ ಆಡಳಿತದ ಭದ್ರಬುನಾದಿಯಿಂದ ಆಗಿದೆ. ಈ ಹಿಂದೆ ಮದ್ರಾಸಿನಿಂದ ಬಂದವರು ಎಂದು ನಾವೆಲ್ಲ ಹೇಳಬೇಕಿತ್ತು. ಆದರೆ ಇಂದು ಬೆಂಗಳೂರಿನವರು ಎಂದು ಹೇಳಿಕೊಂಡರೆ ವಿಶ್ವಖ್ಯಾತಿಯ ಮನ್ನಣೆ ಸಿಗಲಿದೆ. ಬೆಂದಕಾಳೂರು ಇಂದು ಐಟಿಬಿಟಿಯಲ್ಲಿ ಹಾಗೂ ಅಭಿವೃದ್ಧಿಯಲ್ಲಿ ವಿಶ್ವವೇ ನಮ್ಮ ರಾಜ್ಯದತ್ತ ತಿರುಗಿ ನೋಡುವಂತೆ ಮಾಡಿದೆ ಎಂದರು.


ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕೆಂಪೇಗೌಡ ಜಯಂತಿ ಆಚರಣೆ ಯಾಕೆ ಮಾಡುತ್ತೇವೆ ಎಂದರೆ ಇತಿಹಾಸ ಸೃಷ್ಟಿ ಮಾಡಿದವರು, ಜೀವನಕ್ಕೆ ದಾರಿ ತೋರಿದವರನ್ನು ಮರೆಯಬಾರದು ಎಂಬ ಉದ್ದೇಶದಿಂದ. ಜಯಂತಿ ಆಚರಣೆ ಮಾಡುವ ಮೂಲಕ ನೆನಪು ಮಾಡಿಕೊಳ್ಳುತ್ತಿದ್ದೇವೆ. ಬೇರೆ ಪ್ರದೇಶಗಳಿಗೆ ಹೋಲಿಕೆ ಮಾಡಿ ನೋಡಿದಾಗ ನಮಗೆ ಬೇಗ ರಸ್ತೆ, ಆಸ್ಪತ್ರೆ, ನೀರು ಸಿಗುತ್ತಿದೆ ಎಂದರೆ ಇಂತಹ ಮಹನೀಯರ ಶ್ರಮದಿಂದಾಗಿದೆ. ವಿಜಯನಗರದ ಪ್ರಭಾವದಿಂದ ಕೆಂಪೇಗೌಡರು ಆಳ್ವಿಕೆ ಮಾಡಿದರು. ನಮ್ಮ ದೇಶದಲ್ಲಿ ಅತ್ಯಂತ ಆಕರ್ಷಣೀಯವಾಗಿ ಎಲ್ಲ ರೀತಿಯಲ್ಲಿಯೂ ಸರಿಹೋಗುವಂತೆ ಬೆಂಗಳೂರನ್ನು ನಿರ್ಮಿಸಿದ್ದಾರೆ ಎಂದರು.


ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರವನ್ನು ಪೂರ್ಣಕುಂಭದೊಂದಿಗೆ ಹಾಗೂ ವಿವಿಧ ಕಲಾತಂಡಗಳೊಂದಿಗೆ ಬೃಹತ್ ಮೆರವಣಿಗೆಯ ಮೂಲಕ ವೇದಿಕೆಗೆ ಬರಲಾಯಿತು. ಕಾರ್ಯಕ್ರಮ ಕುರಿತು ಸಾಹಿತಿ ತಿಮ್ಮರಾಯಿಗೌಡ ಉಪನ್ಯಾಸ ನೀಡಿದರು.

ತಹಸೀಲ್ದಾರ್ ನಯೀಂ ಉನ್ನಿಸಾ, ಡಿವೈಎಸ್ಪಿ ಡಾ.ಸುಮೀತ್, ತಾಪಂ ಇಒ ಚಂದ್ರಮೌಳಿ, ಸಿಡಿಪಿಒ ಕೃಷ್ಣಮೂರ್ತಿ, ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಂಡ್ಯ ಮುಡಾ ಅಧ್ಯಕ್ಷ ನಯೀಂ ಪಾಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಕೊಣನೂರು ಹನುಮಂತು, ಸುನೀಲ್ ಲಕ್ಷ್ಮೀಕಾಂತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಸೇರಿದಂತೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net