

ಮಡಿಕೇರಿ:
ಸೋಮವಾರಪೇಟೆ ತಾಲೂಕು ಯಲಕನೂರು ಗ್ರಾಮದ ಯುವಕ ಅಜಿತ್ ಕಳೆದ ವರ್ಷ ಅಗ್ನಿವೀರ್ ಆಗಿ ಸೇನೆಗೆ ಸೇರ್ಪಡೆ ಆಗಿದ್ದ. ರಜೆಯಲ್ಲಿ ಗುರುವಾರ (ಜೂ.6) ಬಂದಿರುವ ಈತ ತನ್ನ ಮನೆಗೆ ತೆರಳಿ ಕುಟುಂಬಸ್ಥರನ್ನು ಭೇಟಿಯಾಗುವ ಮೊದಲು ಕುಶಾಲನಗರದಲ್ಲಿ ಮಾಜಿ ಸೈನಿಕ ಅಮೆ ಜನಾರ್ದನ ಅವರ ಬಳಿ ಬಂದು ಆಶೀರ್ವಾದ ಪಡೆದುಕೊಳ್ಳುತ್ತಾನೆ. ಜನಾರ್ದನ ಅವರ ನಿಸ್ವಾರ್ಥ ಸೇವೆಯ ಕಾರಣಕ್ಕೆ ಇಂಥ ಪ್ರಸಂಗಗಳು ಅವರಿಗೆ ಹೊಸದೇನೂ ಅಲ್ಲ.
ಸೇನೆಗೆ ಸೇರಬೇಕು. ದೇಶಕ್ಕೆ ಕಿಂಚಿತ್ತು ಸೇವೆ ಸಲ್ಲಿಸಬೇಕು. ಈ ಮೂಲಕ ಬದುಕಿಗೊಂದು ಭದ್ರ ಭುನಾದಿ ಹಾಕಿಕೊಳ್ಳಬೇಕು ಎನ್ನುವ ಕನಸು ಕೊಡಗಿನ ಯುವಕರಲ್ಲಿ ಸಾಮಾನ್ಯ. ಆದರೆ ಸೇನೆಗೆ ಆಯ್ಕೆ
ಸಂದರ್ಭ ಕಠಿಣ ಪರೀಕ್ಷೆಗಳಲ್ಲಿ ಎಡವುವವರೇ ಹೆಚ್ಚು. ಇಂಥ ಪರಿಸ್ಥಿತಿಯಲ್ಲಿ ಹವಾಲ್ದಾರ್ ಅಮೆ ಜನಾರ್ದನ (ನಿವೃತ್ತ) ಮತ್ತು ತಂಡ ಸೈನ್ಯಕ್ಕೆ ಸೇರಲು ಬಯಸುವವರಿಗೆ ಕಳೆದ 20 ವರ್ಷಗಳಿಂದ ಉಚಿತ ಮಾರ್ಗದರ್ಶನ ಕೊಡುತ್ತಿದೆ.
ದೈಹಿಕ, ವೈದ್ಯಕೀಯ ಹಾಗೂ ಲಿಖಿತ ಪರೀಕ್ಷೆ ಎದುರಿಸಲು ಅಗತ್ಯ ತರಬೇತಿಯನ್ನೂ ಕೊಡಲಾಗುತ್ತದೆ. ಕೊಡಗು ಎಜ್ಯುಕೇಶನಲ್ ಸೋಷಿಯಲ್ ಸರ್ವಿಸ್ ಟ್ರಸ್ಟ್ ಸಹಕಾರದಲ್ಲಿ ಈ ಕಾರ್ಯ ಮಾಡಲಾಗುತ್ತಿದ್ದು, ಈತನಕ ಸುಮಾರು 80ಕ್ಕೂ ಹೆಚ್ಚು ಯುವಕರು ಸೇನೆಗೆ ಸೇರುವಂತೆ ಮಾಡಿದ ಹೆಗ್ಗಳಿಗೆ ಅಮೆ ಜನಾರ್ದನ ಮತ್ತು ತಂಡದ್ದು. ಗುರುವಾರ ರಜೆಯಲ್ಲಿ ಬಂದಿರುವ ಅಜಿತ್ ಹೀಗೆ ಸೇನೆಗೆ ಸೇರ್ಪಡೆ ಆಗಿರುವವರಲ್ಲಿ ಒಬ್ಬನಾಗಿದ್ದಾನೆ.
ಜಗತ್ತಿನ ಅತ್ಯುತ್ತಮ ಸೇನೆಗಳಲ್ಲಿ ಒಂದು ಎನ್ನುವ ಹೆಗ್ಗಳಿಕೆಯ ಭಾತೀಯ ಸೇನೆಗೆ ಆಯ್ಕೆ ಆಗುವುದು ಅಷ್ಟು ಸುಲಭವಲ್ಲ. ಕಠಿಣ ದೈಹಿಕ, ವೈದ್ಯಕೀಯ ಹಾಗೂ ಲಿಖಿತ ಪರೀಕ್ಷೆ ಎದುರಿಸಬೇಕಾಗುತ್ತದೆ. ಹಾಗಾಗಿ ಸೇನೆಗೆ ಸೇರಿ ದೇಶ ಸೇವೆ ಸಲ್ಲಿಸಬೇಕು ಎನ್ನುವ ಬಹುತೇಕ ಯುವಕರ ಕನಸು ಆಯ್ಕೆ ಹಂತದಲ್ಲೇ ಕಮರಿ ಹೋಗಿಬಿಡುತ್ತದೆ. ಆದರೆ ಸೈನ್ಯದಲ್ಲಿ ಕೆಲಸ ಮಾಡುವ ನಿರ್ದಿಷ್ಟ ಗುರಿ ಇಟ್ಟುಕೊಂಡು ನಿಯಮಿತವಾಗಿ ಅಭ್ಯಾಸ ಮಾಡಿದರೆ ಸೇನೆಗೆ ಸೇರ್ಪಡೆ ಕಷ್ಟ ಅನ್ನಿಸುವುದಿಲ್ಲ ಎನ್ನುವುದು ಈಗಾಗಲೇ ಸೇವೆಯಲ್ಲಿ ಇರುವವರ ಅನುಭವದ ಮಾತು. ಈ ಹಿನ್ನೆಲೆಯಲ್ಲಿ ಆಸಕ್ತ ಯುವಕರಿಗೆ ಹವಾಲ್ದಾರ್ ಅಮೆ ಜನಾರ್ದನ(ನಿವೃತ್ತ) ಮತ್ತು ತಂಡ ಮಾರ್ಗದರ್ಶನ ನೀಡುತ್ತಾ ಬಂದಿದೆ.
ಮೂಲತಃ ಮಡಿಕೇರಿ ತಾಲೂಕು ಭಾಗಮಂಡಲ ಸಮೀಪದ ಚೆಟ್ಟಿಮಾನಿ ಗ್ರಾಮದವರಾದ ಅಮೆ ಜನಾರ್ದನ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಕುಶಾಲನಗರದಲ್ಲಿ ನೆಲೆಸಿದ್ದಾರೆ. ಆಸಕ್ತರಿಗೆ ಸೇನೆ ಸೇರುವುದಕ್ಕೆ ಸಹಕಾರಿ ಆಗಲಿ ಎನ್ನುವ ಉದ್ದೇಶದಿಂದ ಸೈನ್ಯದಲ್ಲಿನ ತಮ್ಮ ಅನುಭವವನ್ನು 20 ವರ್ಷಗಳಿಂದ ಈಗಿನ ಯುವಕರಿಗೆ ಧಾರೆ ಎರೆಯುತ್ತಿದ್ದಾರೆ. ಕುಶಾಲನಗರದ ಮಾಜಿ ಸೈನಿಕರ ಸಂಘದ ಬೆಂಬಲವೂ ಇವರಿಗಿದೆ. ಇದರ ಜತೆಯಲ್ಲಿ ಕೊಡಗು ಎಜ್ಯುಕೇಶನಲ್ ಸೋಷಿಯಲ್ ಸರ್ವಿಸ್ ಟ್ರಸ್ಟ್ ಕೂಡ ಜನಾರ್ದನ ಅವರ ಜತೆಗಿದೆ.
ಸೇನಾ ನೇಮಕಾತಿ ರ‍್ಯಾಲಿ ಇರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಬಿದ್ದ ಕೂಡಲೇ ದೈಹಿಕ ತರಬೇತಿ ಕೊಡಲಾರಂಭಿಸುತ್ತಾರೆ. ದೇಹದಾರ್ಢ್ಯತೆ ಹೆಚ್ಚಿಸುವುದಕ್ಕೆ ಸಂಬAಧಿಸಿದAತೆ ಕುಶಾಲನಗರದ ಜಿಎಂಪಿ ಶಾಲೆ, ಕೂಡಿಗೆಯ ಕೊಡಗು ಕ್ರೀಡಾ ಶಾಲೆಯ ಮೈದಾನದಲ್ಲಿ ಪ್ರತಿನಿತ್ಯ 2 ಕಿ.ಮೀ. ಓಟ, ಲಾಂಗ್ ಜಂಪ್, ಪುಷ್‌ಅಪ್, ಪಥಸಂಚಲನ, ಯೋಗ ಹಾಗೂ ಧ್ಯಾನ ಮಾಡಿಸಲಾಗುತ್ತದೆ. ದೇಶಭಕ್ತಿ, ಶಿಸ್ತಿನ ಬಗ್ಗೆ ಪಾಠವೂ ಇರುತ್ತದೆ. 3 ವರ್ಷದ ಹಿಂದೆ ಮಡಿಕೇರಿಯಲ್ಲಿ ಸೇನೆಗೆ ಆಯ್ಕೆ ನಡೆದ ಸಂದರ್ಭ ಜನಾರ್ದನ ಅವರಿಂದ ತರಬೇತಿ ಪಡೆದಿರುವವರ ಪೈಕಿ 7 ಯುವಕರು ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಆಯ್ಕೆ ಆಗಿದ್ದರು.
ದೈಹಿಕ ತರಬೇತಿ ಮಾತ್ರವಲ್ಲದೆ ಲಿಖಿತ ಪರೀಕ್ಷೆಗೂ ತರಬೇತಿ ಕೊಡಲಾಗುತ್ತಿದೆ. ಸೇನೆಗೆ ಆಯ್ಕೆ ಸಂದರ್ಭ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣ ಆದವರಿಗೆ ಪ್ರತಿ ಶನಿವಾರ ಮತ್ತು ಭಾನುವಾರ ಉಚಿತ ತರಗತಿಗಳ ಮುಖಾಂತರ ಮಾರ್ಗದರ್ಶನ ನೀಡಲಾಗುತ್ತಿದೆ. ಇಂಗ್ಲೀಷ್, ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನವನ್ನು ಬೋಧಿಸಲಾಗುತ್ತದೆ.
ಸೇನೆಗೆ ಸೇರಲು ಬಯಸುವವರಿಗೆ ಅಮೆ ಜನಾರ್ದನ ನೇತೃತ್ವದಲ್ಲಿ ನೀಡುವ ತರಬೇತಿ ಸಂಪೂರ್ಣ ಉಚಿತ ಆಗಿರುತ್ತದೆ. ಸೇನೆಯಲ್ಲಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಅಭ್ಯರ್ಥಿಗಳಿಂದ ಮಹತ್ವದ ದಾಖಲೆ ಪಡೆದುಕೊಂಡು ಹಣಕ್ಕಾಗಿ ವಂಚಿಸುವವರ ವಿರುದ್ಧವೂ ಇವರು ಜಾಗೃತಿ ಮೂಡಿಸುತ್ತಾರೆ. ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಭಾಗವಹಿಸಿದ್ದ ಯುವಕರಿಗೆ ಕೆಲಸ ಕೊಡಿಸುವುದಾಗಿ ಕರೆ ಮಾಡುವ ಅನಾಮಿಕರು ಹಣದ ಬೇಡಿಕೆ ಇಡುವುದು ಸಾಮಾನ್ಯ. ಹೀಗೆ ಹಲವರು ಹಣ ಕಳೆದುಕೊಂಡಿದ್ದಾರೆ. ಜನಾರ್ದನ ಮತ್ತು ಸಂಗಡಿಗರು ಇಂಥ ಜಾಲದ ವಿರುದ್ಧವೂ ಆಗಾಗ್ಗೆ ಎಚ್ಚರಿಕೆ ಕೊಡುತ್ತಿರುತ್ತಾರೆ.
ಸಾಕಷ್ಟು ಯುವಕರಿಗೆ ಸೇನೆಗೆ ಸೇರುವ ಹಂಬಲ ಇರುತ್ತದೆ. ನೇಮಕಾತಿ ರ‍್ಯಾಲಿ ಸಂದಭÀð ಬಹುತೇಕರು ನೇರವಾಗಿ ಹೋಗಿ ಅಲ್ಲಿ ನಡೆಸುವ ಪರೀಕ್ಷೆಗಳಲ್ಲಿ ವಿಫಲರಾಗುತ್ತಾರೆ. ಆದರೆ ಸೂಕ್ತ ಸಿದ್ಧತೆಗಳ ಜೊತೆಯಲ್ಲಿ ಹೋದರೆ ಸೇನೆಗೆ ಸೇರುವುದು ಸುಲಭ. ಈ ಬಗ್ಗೆ ನಾವು ಆಸಕ್ತ ಯುವಕರಿಗೆ ಮಾಹಿತಿ ನೀಡುತ್ತೇವೆ. ನಮ್ಮಿಂದ ಮಾರ್ಗದರ್ಶನ, ತರಬೇತಿ ಪಡೆದ 80ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.