

ಬಾಳೆಹೊನ್ನೂರು: ವಿವಾಹಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಹಣ್ಣಿನ ಗಿಡ, ಬೀಜಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ವಿಜಯವಾಣಿ ಪತ್ರಿಕಾ ವಿತರಕ ಯೋಗೀಶ್ ಪರಿಸರ ಕಾಳಜಿ ಮೆರೆದಿದ್ದಾರೆ.
ಕಡಬಗೆರೆಯ ವಿಜಯವಾಣಿ ಪತ್ರಿಕೆ ವಿತರಕ ಸಿ.ಪಿ.ಯೋಗೇಶ್ ಅವರ ವಿವಾಹ ಖಾಂಡ್ಯ ಹೋಬಳಿ ಮಲಮಕ್ಕಿಯ ನಿವೇದಿತಾ ಜತೆ ಗುರುವಾರ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು. ಮದುವೆಗೆ ಆಗಮಿಸಿದ ಎಲ್ಲ ಅತಿಥಿಗಳಿಗೆ ವಧು-ವರರು ವಿವಿಧ ಜಾತಿಯ ಹಣ್ಣಿನ ಗಿಡಗಳು, ಹಣ್ಣಿನ ಬೀಜಗಳನ್ನು ನೀಡಿ ಸತ್ಕರಿಸಿದರು. ಈ ಕುರಿತು ಮಾತನಾಡಿದ ಯೋಗೀಶ್, ನನ್ನ ವಿವಾಹದ ಸಂದರ್ಭದಲ್ಲಿ ಏನಾದರೂ ಸಮಾಜಮುಖಿ ಕೆಲಸ ಮಾಡಬೇಕು ಹಾಗೂ ಪರಿಸರಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ವಿವಾಹಕ್ಕೆ ಆಗಮಿಸಿದ ಎಲ್ಲರಿಗೂ ಹಣ್ಣಿನ ಗಿಡ, ಹಣ್ಣಿನ ಬೀಜ ನೀಡಿದ್ದೇನೆ. ತೆಗೆದುಕೊಂಡ ಹೋದ ಎಲ್ಲರೂ ಗಿಡ ನೆಟ್ಟು ಪೋಷಿಸಿದರೆ ಪರಿಸರಕ್ಕೆ ಸಣ್ಣ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.