

ಮಡಿಕೇರಿ: ವಿಶ್ವ ಪರಿಸರ ದಿನಾಚರಣೆಯು ಬುಧವಾರ ನಗರದಲ್ಲಿ ಅರ್ಥಪೂರ್ಣವಾಗಿ ಜರುಗಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದ ಬಳಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹೊಸಮನಿ ಪುಂಡಲಿಕ ಅವರು ಪರಿಸರ ಜಾಗೃತಿ ಜಾಥಾಗೆ ಚಾಲನೆ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಬಿ.ಜಯಲಕ್ಷ್ಮಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ, ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್, ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಎಚ್.ಆರ್.ಯೋಗೀಶ್ ಇತರರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್, ಪರಿಸರ ಉಳಿದಲ್ಲಿ ಮಾತ್ರ ಮಾನವನ ಬದುಕು ಉತ್ತಮವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಗಿಡ, ಮರಗಳನ್ನು ಯಥೇಚ್ಛವಾಗಿ ಬೆಳೆಸಿ ಪರಿಸರವನ್ನು ಸಂರಕ್ಷಿಸಬೇಕು. ವರ್ಷದಿಂದ ವರ್ಷಕ್ಕೆ ವಾತಾವರಣದಲ್ಲಿನ ಹವಾಮಾನ ವೈಪರೀತ್ಯವನ್ನು ಕಾಣಬಹುದಾಗಿದೆ. ಆದ್ದರಿಂದ ಪರಿಸರವನ್ನು ಸಂರಕ್ಷಣೆ ಮಾಡುವತ್ತ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಕೋರಿದರು.
ಬಳಿಕ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ಏರ್ಪಡಿಸಿ ಪರಿಸರದ ಮಹತ್ವ ಕುರಿತು ಸಂದೇಶ ನೀಡಲಾಯಿತು. ನಂತರ ನಗರದ ಓಂಕಾರೇಶ್ವರ ದೇವಾಲಯ ಬಳಿ ಇರುವ ಗೌರಿ ಕೆರೆಯಲ್ಲಿ ಸ್ವಚ್ಛತಾಕಾರ್ಯವನ್ನು ಕೈಗೊಳ್ಳಲಾಯಿತು. ಸ್ವಚ್ಛತಾ ಕಾರ್ಯದಲ್ಲಿ ಹಲವರು ಪಾಲ್ಗೊಂಡು ಗಮನ ಸೆಳೆದರು. ಬಳಿಕ ಆಂಜನೇಯ ದೇವಾಲಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡಿದ್ದು, ಗಮನ ಸೆಳೆಯಿತು.
ಗಮನ ಸೆಳೆದ ಪರಿಸರ ಜಾಥಾ: ನಗರಸಭೆಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಪರಿಸರ ಕಾರ್ಯಕ್ರಮಕ್ಕೆ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಹೊಸಮನಿ ಪುಂಡಲಿಕ ಚಾಲನೆ ನೀಡಿದರು. ನಗರದ ಫೀಲ್ಡ್ ಮಾ?ರ್ಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಆರಂಭಗೊಂಡ ಜಾಥಾಕ್ಕೆ ಪ್ರಧಾನ ಜಿಲ್ಲಾ ನ್ಯಾಯಾಧೀಶ ಹೊಸಮನಿ ಪುಂಡಲಿಕ ಚಾಲನೆ ನೀಡಿದರು.