

ತಿ.ನರಸೀಪುರ: ಸಾಮಾಜಿಕ ವಲಯ ಅರಣ್ಯ ಇಲಾಖೆ ಹಾಗೂ ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯ ಸಹಯೋಗದಲ್ಲಿ ಸೋಮವಾರ ಅಂತಾರಾಷ್ಟ್ರೀಯ ಯೋಗ ದಿನ ಹಾಗೂ ವಿಶ್ವ ಪರಿಸರ ದಿನವನ್ನು ಸೋಮವಾರ ಪಟ್ಟಣದ ಗುರುಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಗುರುಭವನದ ಆವರಣದಲ್ಲಿ ಗಿಡ ನೆಡಲಾಯಿತು. ಯೋಗ ದಿನಾಚರಣೆ ಅಂಗವಾಗಿ ಯೋಗಾ ಪ್ರದರ್ಶನ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಡಿ.ರಾಜೇಶ್ ಮಾತನಾಡಿ, ಸಕಲ ಜೀವಿಗಳಿಗೂ ಬದುಕಿಗೆ ಪೂರಕವಾದ ಎಲ್ಲ ಸಂಪನ್ಮೂಲಗಳನ್ನು ನಮಗೆ ಪರಿಸರ ನೀಡುತ್ತದೆ. ಅದರ ರಕ್ಷಣೆ ನಮ್ಮ ಹೊಣೆ. ವಿಶ್ವ ಪರಿಸರ ದಿನದ ಈ ವರ್ಷದ ಘೋಷಣಾ ವಾಕ್ಯ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಎಂಬುದಾಗಿದೆ. ಪ್ಲಾಸ್ಟಿಕ್‌ಮುಕ್ತ ಪರಿಸರ ನಿರ್ಮಿಸುವ ಕಂಕಣ ತೊಡಬೇಕಿದೆ ಎಂದರು.
ಪ್ರಸಕ್ತ ಸನ್ನಿವೇಶದಲ್ಲಿ ನಾವು ಬಹಳ ಒತ್ತಡದ ಜೀವನವನ್ನು ನಡೆಸುತ್ತಿದ್ದೇವೆ. ಈ ಒತ್ತಡ ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದೆ. ಈ ದುಷ್ಪರಿಣಾಮ ತಡೆಗಟ್ಟಲು ಯೋಗ ನಮ್ಮ ದೈನಂದಿನ ಚಟುವಟಿಕೆ ಆಗಬೇಕು. ಆಗ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಪ್ರತಿನಿತ್ಯ ಯೋಗ ಮಾಡುವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಸುಧೀಂದ್ರ ಮಾತನಾಡಿ, ಆಯುಷ್ ಇಲಾಖೆಯಿಂದ ಎಲ್ಲ ತರದ ಆರೋಗ್ಯ ಸಮಸ್ಯೆಗಳಿಗೆ ಔಷಧ ಲಭ್ಯವಿದೆ. ಆಯುರ್ವೇದ ಚಿಕಿತ್ಸೆ ನಮ್ಮ ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಆಯುರ್ವೇದ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದರಲ್ಲದೆ, ಯೋಗದ ಮೂಲಕ ಆರೋಗ್ಯ ಸಮತೋಲನ ಕಾಯ್ದುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆಯುರ್ವೇದ ವಿದ್ಯಾಲಯದ ಪ್ರಾಧ್ಯಾಪಕ ಡಾ.ಪ್ರವೀಣ್, ಉಪವಲಯ ಅರಣ್ಯ ಅಧಿಕಾರಿಗಳಾದ ಸಿ.ಅಂತೋನಿ ಸ್ವಾಮಿ, ಮಹದೇವಸ್ವಾಮಿ, ವಿನಯ್ ಕುಮಾರ್, ಗಸ್ತು ಅರಣ್ಯಪಾಲಕರಾದ ಚಿಕ್ಕಬಸವಯ್ಯ, ಪುಟ್ಟಣ್ಣ, ಮೋಹನ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.