ನಿಶ್ಚಿತಾರ್ಥವಾಗಿದ್ದ ಕಾನೂನು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

lady Suside RTL
Published on

ಮೈಸೂರು: ಮದುವೆ ನಿಶ್ಚಿತಾರ್ಥವಾದ ಬಳಿಕ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿದೆ ಎಂದು ಮನನೊಂದು ಕಾನೂನು ವಿದ್ಯಾರ್ಥಿನಿ ಸೋಮವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಮಿಳುನಾಡಿನ ಊಟಿ ಮೂಲದ ಕವೀಶಾ(21) ಮೃತ ವಿದ್ಯಾರ್ಥಿನಿ. ನಗರದ ಜೆಎಸ್‌ಎಸ್ ಕಾನೂನು ಕಾಲೇಜಿನಲ್ಲಿ 7ನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಕವೀಶಾ ಊಟಿಯ ಕಿರಣ್‌ನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ಮನೆಯವರಿಗೂ ತಿಳಿದಿತ್ತು. ಹೀಗಾಗಿ, ಕಿರಣ್ ಮನೆಯವರು ಕವೀಶಾ ಮನೆಗೆ ಬಂದು ಅವರ ಪಾಲಕರನ್ನು ಒಪ್ಪಿಸಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಕಿರಣ್ ವರದಕ್ಷಿಣೆಯಾಗಿ ಕಾರು, ಚಿನ್ನ ನೀಡಬೇಕು ಎಂದು ಪೀಡಿಸುತ್ತಿದ್ದ. ನೀಡದಿದ್ದರೆ ಮದುವೆ ನಿಲ್ಲಿಸುವುದಾಗಿ ಬೆದರಿಸಿದ್ದ ಎನ್ನಲಾಗಿದೆ.
ಇದರಿಂದಾಗಿ ಮನನೊಂದ ಕವೀಶಾ ತಾನು ತಂಗಿದ್ದ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕವೀಶಾ ಪಾಲಕರು ನೀಡಿದ ದೂರಿನ ಮೇರೆಗೆ ಕಿರಣ್, ಆತನ ತಂದೆ ಸೇತು ಮಾಧವ, ತಾಯಿ ಲತಾ ಹಾಗೂ ಮಾವನ ವಿರುದ್ಧ ಕುವೆಂಪುನಗರ ಠಾಣೆ ಪೊಲೀಸರು ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net