

ಜಿ.ನಾಗರಾಜ್, ಬೂದಿಕೋಟೆ
ಆಧುನಿಕತೆ ಬೆಳೆದಂತೆ ಬಿದಿರು ಉತ್ಪನ್ನಗಳಿಗೆ ಪರ್ಯಾಯವಾಗಿ ಪ್ಲಾಸ್ಟಿಕ್ ಹಾಗೂ ಇತರೆ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದ್ದು, ಬಿದಿರಿನ ಉತ್ಪನ್ನಗಳ ಬೇಡಿಕೆ ಕಡಿಮೆ ಆಗುತ್ತಿರುವುದರಿಂದ ಅದನ್ನೇ ನಂಬಿ ಜೀವನ ಬಂಡಿ ಸಾಗಿಸುತ್ತಿದ್ದವರ ಸ್ಥಿತಿ ಅತಂತ್ರವಾಗಿದೆ.
ಕೆಲ ಸಮುದಾಯದವರು ಹಲವು ದಶಕಗಳಿಂದ ಬಿದಿರಿನ ಉತ್ಪನ್ನಗಳ ತಯಾರಿಸುತ್ತಾ ಬಂದಿದ್ದಾರೆ. ನಮ್ಮ ಪೂರ್ವಜರ ಕಾಲದಿಂದಲೂ ಬಿದಿರಿನ ವಸ್ತುಗಳ ಬಳಕೆ ಹೆಚ್ಚಾಗಿತ್ತು. ಕಾಲ ಕ್ರಮೇಣ ಬಿದಿರಿನ ಬಳಕೆ ಕಡಿಮೆಯಾಗಿ ಅಳಿವಿನಂಚಿಗೆ ಬಂದು ತಲುಪಿದೆ. ಆಧುನಿಕತೆ ಬೆಳೆದು ವಿವಿಧ ಬಗೆಯ ವಸ್ತುಗಳು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಬಿದಿರಿನ ಉತ್ಪನ್ನಗಳನ್ನು ಖರೀದಿಸುವವರ ಸಂಖ್ಯೆ ಇಳಿಮುಖವಾಗಿದೆ.
ಈ ಹಿಂದೆ ಬಿದಿರಿನಿಂದ ತಯಾರಿಸಿದ ಬುಟ್ಟಿ, ಬೀಸಣಿಗೆ, ಮಕ್ಕರಿ, ಕೋಳಿ ಪಂಜರ, ಏಣಿ ಸೇರಿ ಹತ್ತಾರು ಬಗೆಯ ವಸ್ತುಗಳನ್ನು ಬಳಕೆ ಮಾಡಲಾಗುತ್ತಿತ್ತು. ಬೇಡಿಕೆಗೆ ತಕ್ಕಂತೆ ತಯಾರಿಸುವವರು ಅಧಿಕ ಪ್ರಮಾಣದಲ್ಲಿದ್ದರು. ಆದರೆ ಆಧುನಿಕ ತಂತ್ರಜ್ಞಾನದ ಪರಿಕರಗಳ ನಡುವೆ ಪೈಪೋಟಿ ನೀಡಲು ಸಾಧ್ಯವಾಗದೇ, ಪಾರಂಪರಿಕವಾಗಿ ಮಾಡಿಕೊಂಡು ಬಂದ ಕುಲಕಸುಬನ್ನು ತೊರೆದು ದಾರಿ ಕಾಣದೇ ಕೂಲಿ ಕೆಲಸದತ್ತ ಮುಖ ಮಾಡುತ್ತಿದ್ದಾರೆ.
ಪರಂಪರೆಗೆ ಮತ್ತು ಕುಲಕಸುಬಿಗೆ ಇಂದಿನ ಯುವಕರು ಸಹ ಆಸಕ್ತಿ ತೋರುತ್ತಿಲ್ಲ. ಬದಲಾಗಿ ಬೆಂಗಳೂರು ಸೇರಿ ಇತರೆ ಪಟ್ಟಣಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ.
ಬಿದಿರು ಉತ್ಪನ್ನಗಳಿಗೆ ಈಗ ಬೇಡಿಕೆ ಇಲ್ಲದ ಕಾರಣ ಬೆಲೆಯೂ ಸಹ ಮೊದಲಿನಂತಿಲ್ಲ. ಇದರಿಂದ ದಿನದ ಸಂಪಾದನೆ ಕಡಿಮೆಯಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಕುಲಕಸುಬು ತೊರೆದು ಬೇರೆ ಕೆಲಸದ ಕಡೆ ಒಲವು ತೋರಿಸುತ್ತಿದ್ದಾರೆ ಎಂದು ಸಮುದಾಯದ ಮುಖಂಡರ ಆರೋಪವಾಗಿದೆ.
ಬಂಗಾರಪೇಟೆ ತಾಲೂಕಿನ ತುಮಟಗೆರೆ ಗ್ರಾಮದಲ್ಲಿ 15 ಕ್ಕೂ ಹೆಚ್ಚಿನ ಕುಟುಂಬಗಳು ಬಿದಿರಿನ ಕರಕುಶಲ ವಸ್ತುಗಳನ್ನು ತಯಾರಿಸುತ್ತಿದ್ದರು. ಈ ಹಿಂದೆ ರೇಷ್ಮೆ ಸಾಕಾಣಿಕೆಗೆ ಬೇಕಾದಂತಹ ತಟ್ಟೆಗಳನ್ನು ಮತ್ತು ಚಂದರಂಕಿಗಳನ್ನು ಬಿದಿರಿನಲ್ಲಿಯೇ ತಯಾರಿಸುತ್ತಿದ್ದು, ಬೇಡಿಕೆ ಸಹ ಹೆಚ್ಚಾಗಿ ಇರುತ್ತಿತ್ತು. ಅವುಗಳ ಮಾರಾಟದಿಂದ ಉತ್ತಮ ಆದಾಯ ಪಡೆಯುತ್ತಿದ್ದರು. ಅದಕ್ಕೆ ಬೇಕಾದಂತಹ ಬಿದಿರು ಸ್ಥಳಿಯವಾಗಿ ದೊರಕದೆ ಭದ್ರಾವತಿಯಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ದಿನ ಕಳೆದಂತೆ ರೇಷ್ಮೆ ಸಾಕಾಣಿಕೆಯಲ್ಲಿ ಬಿದಿರಿನ ತಟ್ಟೆಗಳು ಮತ್ತು ಚಂದರಂಕಿಗಳು ಮಾಯವಾಗಿ ಆಧುನಿಕ ತಂತ್ರಜ್ಞಾನದಲ್ಲಿ ರೇಷ್ಮೆ ಸಾಕಾಣಿಕೆ ಮಾಡಲಾಗುತ್ತಿದೆ.
ಈಗ ಬಿದಿರಿನ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಸಹ ಇಲ್ಲ. ಇದರಿಂದ ಬಹುತೇಕ ಕುಟುಂಬಗಳಿಗೆ ಕೆಲಸ ಮತ್ತು ಆದಾಯ ಇಲ್ಲದೆ ಕುಲಕಸಬು ಬಿಟ್ಟು ಬೇರೆ ಕೆಲಸಗಳಿಗೆ ಮಾರು ಹೋಗಿದ್ದಾರೆ. ಇದರಿಂದ ಬಿದಿರಿನ ಪರಿಕರಗಳ ತಯಾರಿಕಾ ಸಮುದಾಯ ನಶಿಸಿ ಹೋಗುವಂತಾಗಿದೆ.
ವಂಶ ಪಾರಂಪರಿಕವಾಗಿ ಬಿದಿರಿನ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವು. ಈ ಹಿಂದೆ ಇದ್ದಂತೆ ಬಿದಿರಿನ ಪರಿಕರಗಳಿಗೆ ಬೇಡಿಕೆ ಇಲ್ಲ. ಜತೆಗೆ ಉತ್ಪನ್ನಗಳ ಮಾರಾಟಕ್ಕೆ ಮಾರುಕಟ್ಟೆ ಸೌಲಭ್ಯವಿಲ್ಲದೆ ಸಂತೆಗಳಲ್ಲಿ ಮಾರಾಟ ಮಾಡಬೇಕಾಗಿದೆ. ಇದರಿಂದ ಕುಲಕಸಬನ್ನು ತೊರೆದು ಬೇರೆ ಕಾಯಕದಲ್ಲಿ ನಿರತರಾಗಿದ್ದಾರೆ. ನಾನೂ ಸಹ ಬೆಂಗಳೂರಿನ ಕಾರ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದೆ. ಕರೋನಾ ಸಂದರ್ಭದಲ್ಲಿ ಮರಳಿ ಬಿದಿರಿನ ಉತ್ಪನ್ನಗಳನ್ನು ತಯಾರಿಸಲು ಮಗ್ನನಾಗಿದ್ದೇನೆ. ಇದರಿಂದ ಸಂಪಾದನೆ ಆಗುವಂತಹ ಹಣ ಕೇವಲ ಅಂದಿನ ಜೀವನ ನಿರ್ವಹಣೆಗೆ ಸಾಕಾಗುತ್ತಿದೆ. - ಸುರೇಶ್ ತುಮಟಗೆರೆ, ವ್ಯಾಪಾರಸ್ಥ