ವರ್ಗವಾದ ಶಿಕ್ಷಕಿಗೆ ಭಾವುಕ ವಿದಾಯ

17 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸುಮಾರು 3 ದಶಕಗಳ ಕಾಲ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸಿದ ಶಿಕ್ಷಕಿ ವರ್ಗಾವಣೆಗೊಂಡರೆ ಮಕ್ಕಳು ಮಾತ್ರವಲ್ಲದೆ ಇಡೀ ಗ್ರಾಮದ ಜನರು ಭಾವುಕ ವಿದಾಯ ನೀಡಿದ ಘಟನೆಗೆ ಮುಮ್ಮಿಗಟ್ಟಿ ಗ್ರಾಮ ಸಾಕ್ಷಿಯಾಗಿದೆ.
ಇಂತಹ ಅಪರೂಪದ ಕ್ಷಣಕ್ಕೆ ಕಾರಣರಾದವರು ಮುಮ್ಮಿಗಟ್ಟಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾ ಬೆಟಗೇರಿ.
ಶಾಲೆಗೆ 1994ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಆಗಮಿಸಿದ ಗೀತಾ ಅವರು 30 ವರ್ಷ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರಿಗೆ ಧಾರವಾಡ ಗಾಂಧಿನಗರದ ಸರ್ಕಾರಿ ಶಾಲೆ ನಂ.5 ಕ್ಕೆ ವರ್ಗಾವಣೆಯಾಗಿದೆ. ಹೀಗಾಗಿ ಶಾಲೆ ಆವರಣದಲ್ಲಿ ಬೀಳ್ಕೊಡುವ ಸಮಾರಂಭ ಏರ್ಪಡಿಸಲಾಗಿತ್ತು. ಸಮಾರಂಭದುದ್ದಕ್ಕೂ ಗ್ರಾಮದ ಅನೇಕರು ಶಿಕ್ಷಕಿಯ ಸೇವೆ ಸ್ಮರಿಸಿ ಭಾವುಕಗೊಂಡಿದ್ದರು. ಕಾರ್ಯಕ್ರಮ ಮುಗಿಸಿ ಗೀತಾ ಅವರು ವೇದಿಕೆಯಿಂದ ನಿರ್ಗಮಿಸುವಷ್ಟರಲ್ಲಿ ಮಕ್ಕಳು ಕಣ್ಣೀರು ಸುರಿಸಿ ಶಿಕ್ಷಕಿಯ ಮೇಲಿನ ತಮ್ಮ ಪ್ರೀತಿಯನ್ನು ಹೊರಹಾಕಿದರು.
ಮಕ್ಕಳು ತಪ್ಪು ಮಾಡಿದರೆ ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುತ್ತ ಬಂದಿದ್ದರು. ಸಾಕಷ್ಟು ಬಾರಿ ಮಕ್ಕಳ ವೈಯಕ್ತಿಕ ಸಮಸ್ಯೆಗಳಿಗೆ ಸಹ ಪರಿಹಾರ ನೀಡಿ ಓರ್ವ ತಾಯಿ, ಸ್ನೇಹಿತೆ, ಸಹೋದರಿಯಾಗಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ.
ಗೀತಾ ಅವರು ಶಾಲೆಗೆ ಆಗಮಿಸಿದ ಸಂದರ್ಭದಲ್ಲಿ ವಿದ್ಯಾರ್ಥಿಯಾಗಿದ್ದವರ ಮಕ್ಕಳು ಸಹ ಇವರ ಬಳಿ ಕಲಿಯುತ್ತಿರುವುದು ವಿಶೇಷ. ಇದೇ ಕಾರಣಕ್ಕೆ ಇಡೀ ಗ್ರಾಮದ ಜನರಿಗೆ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಹೀಗಾಗಿ ಶಿಕ್ಷಕಿಯ ವರ್ಗಾವಣೆ ಗ್ರಾಮಸ್ಥರಲ್ಲಿ ಬೇಸರ ಮೂಡಿಸಿರುವುದು ಸಹಜ. ಬೃಹತ್​ ಕಾರ್ಯಕ್ರಮ ಏರ್ಪಡಿಸಿ ಬೀಳ್ಕೊಡುಗೆ ನೀಡಿದ್ದಲ್ಲದೆ, ಸಾರೋಟಿನಲ್ಲಿ ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಸೇವಾ ವೃತ್ತಿಯಲ್ಲಿ ಉಳಿದ 5 ವರ್ಷವನ್ನು ಇದೇ ಶಾಲೆಯಲ್ಲಿ ಕಳೆಯಬೇಕು ಎಂಬ ಆಸೆ ಇದೆ. ಆದರೆ ಅನಾರೋಗ್ಯ ಕಾರಣಕ್ಕೆ ವರ್ಗವಾಗಿದ್ದೇನೆ. ಮನಸ್ಸು ಇಲ್ಲದಿದ್ದರೂ ವರ್ಗಾವಣೆ ಒಪ್ಪಿಕೊಳ್ಳಲೇಬೇಕು. ಮಕ್ಕಳ, ಗ್ರಾಮಸ್ಥರ ಪ್ರೀತಿಗೆ ನಾನು ಚಿರಋಣಿಯಾಗಿದ್ದೇನೆ.*ಗೀತಾ ಬೆಟಗೇರಿ, ಶಿಕ್ಷಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net