

ಮೈಸೂರು: ನಗರದ ಅರಮನೆ ಬಳಿಯಲ್ಲಿ ಗುರುವಾರ ಸಂಜೆ ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಕೂಟರ್ ಬೆಂಕಿಗೆ ಆಹುತಿಯಾಗಿದೆ.
ಗುಂಡ್ಲುಪೇಟೆ ನಿವಾಸಿ, ಪ್ರಸ್ತುತ ನಗರದ ರಾಮಕೃಷ್ಣ ನಗರದಲ್ಲಿ ನೆಲೆಸಿರುವ ಬಸವರಾಜು ಎಂಬವರೇ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಅವಘಡದಿಂದ ಪಾರಾದವರು.
ಬಸವರಾಜು ಸ್ನೇಹಿತನ ಎಲೆಕ್ಟ್ರಿಕ್ ಸ್ಕೂಟರ್ ಪಡೆದು ರಾಮಕೃಷ್ಣನಗರದಿಂದ ನಗರಕ್ಕೆ ಆಗಮಿಸಿದ್ದರು. ಅರಮನೆಯ ಗನ್‌ಹೌಸ್ ಬಳಿ ಸ್ಕೂಟರ್ ತೆರಳುವಾಗ ಸ್ಕೂಟರ್ ನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯನ್ನು, ಗಮನಿಸಿದ ಸಾರ್ವಜನಿಕರು ಬಸವರಾಜು ಅವರನ್ನು ಎಚ್ಚರಿಸುವ ಕೆಲಸ ಮಾಡಿದರು. ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಮೂಲೆಯಲ್ಲಿ ಸ್ಕೂಟರ್ ನಿಂದ ಬಸವರಾಜು ಕೆಳಗಿಳಿದು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.
ಸ್ಥಳಕ್ಕೆ ನಗರ ಸಂಚಾರ ಉಪ ವಿಭಾಗದ ಎಸಿಪಿ ಪರಶುರಾಮಪ್ಪ ಭೇಟಿ ನೀಡಿ ಪರಿಶೀಲಿಸಿದರು. ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.