

ಶ್ರೀನಿವಾಸಪುರ: ತಾಲೂಕಿನ ಅಡ್ಡಗಲ್ ಗ್ರಾಮದಿಂದ ಕೂರಿಗೇಪಲ್ಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ತಿರುವಿನಲ್ಲಿ ವಿದ್ಯುತ್ ಕಂಬವೊಂದನ್ನು ಅವೈಜ್ಞಾನಿಕವಾಗಿ ಹಾಕಿದ್ದು, ವಾಹನ ಸವಾರರಿಗೆ ತಿರುವಿನಲ್ಲಿನ ಕಂಬ ಕಾಣಿಸದೆ ಅದೆಷ್ಟೊ ಚಾಲಕರು ಕೈದಲೆಳೆ ಅಂತರದಿಂದ ಅಪಘಾತದಿಂದ ತಪ್ಪಿಸಿಕೊಂಡಿದ್ದಾರೆ. ಇದರ ಮಧ್ಯೆ ಇತ್ತೀಚೆ ಕಾರೊಂದು ಕಂಬಕ್ಕೆ ಡಿಕ್ಕಿಯಾಗಿ ಪಕ್ಕದ ಹೊಲದಲ್ಲಿ ನಿಂತಿದ್ದು, ದೊಡ್ಡ ದುರಂತ ತಪ್ಪಿದೆ.
24 ಗಂಟೆಯೂ ವಿದ್ಯುತ್ ಸರಬರಾಜು ಇರುವ ಈ ಲೈನ್ನ ಕಂಬವು ಒಂದು ವೇಳೆ ರಸ್ತೆಗೆ ಬಿದ್ದಿದ್ದರೆ ವಿದ್ಯುತ್ ತಾಗಿ ದೊಡ್ಡ ಅನಾಹುತ ನಡೆದೇ ಹೋಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ಚಿತ್ರಣ ವಿವರಿಸಿದ್ದಾರೆ.
ಸಾರ್ವಜನಿಕರು ಹಲವು ಬಾರಿ ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಸಹ ಇಂದು&ನಾಳೆ ಎಂದೇ ಕಾಲ ನೂಕುತ್ತಾ ಬರುತ್ತಿದ್ದು, ಕಳೆದ 2ತಿಂಗಳಿಂದಲೂ ಕಂಬದ ಜಾಗ ಬದಲಾಯಿಸಿಲ್ಲ.
ಮಳೆ ಬೀಳುವ ಸಂದರ್ಭದಲ್ಲಿ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವೂ ಸಹ ಕಡಿತವಾಗುತ್ತದೆ. ವಿದ್ಯುತ್ ತಂತಿಗಳ ಮೇಲೆ ಹಾಗೂ ತಂತಿಗಳ ಕೆಳಗಡೆ ಮರಗಳು ಬೆಳೆದಿದ್ದರೂ ಸಹ ತೆರವುಗೊಳಿಸದೆ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈಗಲಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸುವ ಮೂಲಕ ಮುಂದಾಗುವ ಸಾವು&ನೋವುಗಳನ್ನು ತಡೆಯಬೇಕು ಎಂದು ಸ್ಥಳಿಯರು ಮತ್ತು ವಾಹನ ಸವಾರರು ಆಗ್ರಹಿಸಿದ್ದಾರೆ.