

ಚಿದಾನಂದ ಮಾನೆ ರಟ್ಟಿಹಳ್ಳಿ
ಪಟ್ಟಣ ಸೇರಿ ತಾಲೂಕಿನ ಮಾಸೂರು ಗ್ರಾಮದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಮುಗಿದಿದ್ದರೂ ವಿದ್ಯುತ್ ಕಂಬಗಳಿಗೆ ಹೈಮಾಸ್ಟ್ ದೀಪಗಳನ್ನು ಅಳವಡಿಸಿದ್ದರೂ ಅವುಗಳಿಗೆ ಚಾಲನೆ ನೀಡಿಲ್ಲ. ಇದರಿಂದಾಗಿ ಹೆದ್ದಾರಿ ತುಂಬ ಕತ್ತಲು ಆವರಿಸಿ ಅಪಾಯಕ್ಕೆ ಆಹ್ವಾನಿಸುತ್ತಿದೆ.
ಬೈಂದೂರು-ರಾಣೆಬೆನ್ನೂರು ರಾಷ್ಟ್ರೀಯ ಹೆದ್ದಾರಿ 766ಸಿ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಣೆಬೆನ್ನೂರು ತಾಲೂಕಿನ ಹಾರೋಗೊಪ್ಪ ಗ್ರಾಮದ ಬಳಿ 5.35 ಕಿ.ಮೀ, ರಟ್ಟಿಹಳ್ಳಿಯಲ್ಲಿ 2 ಕಿ.ಮೀ. ಮತ್ತು ಮಾಸೂರಿನಲ್ಲಿ 5 ಕಿ.ಮೀ ಸೇರಿ ಒಟ್ಟು 12.53 ಕಿ.ಮೀ ರಸ್ತೆ ನಿರ್ವಣ, ರಸ್ತೆ ಬದಿಯಲ್ಲಿ ಗಟಾರು ಮತ್ತು ವಿದ್ಯುದ್ದೀಪಗಳ ಅಳವಡಿಕೆ ಕಾಮಗಾರಿ ಕಳೆದ 2 ವರ್ಷದಿಂದ ನಡೆಯುತ್ತಿದೆ. ಕಾಮಗಾರಿ ಅವಧಿ ಮುಕ್ತಾಯದ ಹಂತ ತಲುಪಿದ್ದು, ರಸ್ತೆ ಬದಿಯಲ್ಲಿ ವಿದ್ಯುತ್ ಕಂಬ ಕೂಡ ಅಳವಡಿಸಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುದ್ದೀಪಗಳು ಬೆಳಗಲು ಚಾಲನೆ ನೀಡಿಲ್ಲ.
ಪಟ್ಟಣದ ಪ್ರಿಯದರ್ಶಿನಿ ಕಾಲೇಜ್ನಿಂದ ಪ್ರವಾಸಿ ಮಂದಿರದವರೆಗೆ 2 ಕಿ.ಮೀ. ರಸ್ತೆ ನಿರ್ವಿುಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಸಿಂಗಲ್ ಆಮ್ರ್ ಬಾಕೇಟ್ ಲೈಟ್ ಮತ್ತು ಹೊಸ ಬಸ್ ನಿಲ್ದಾಣ ಹಾಗೂ ಭಗತ್ಸಿಂಗ್ ವೃತ್ತದಲ್ಲಿ ಹೈಮಾಸ್ಟ್ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ತಾಲೂಕಿನ ಮಾಸೂರು ಗ್ರಾಮದಲ್ಲಿ ಶಿಕಾರಿಪುರ ಕ್ರಾಸ್ನಿಂದ ಕೋಡಮಗ್ಗಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಮತ್ತು ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನ ಎಟಿಎಸ್ ಎನರ್ಜಿಸ್ ಕಂಪನಿ ಈ ವಿದ್ಯುತ್ ಕಂಬಗಳ ಅಳವಡಿಕೆಯ ಗುತ್ತಿಗೆಯನ್ನು ಪಡೆದು ಕಾಮಗಾರಿ ಮುಗಿಸಿ ಸಂಬಂಧಿಸಿದ ರಸ್ತೆ ನಿರ್ವಣದ ಏಜೆನ್ಸಿಗೆ ಒಪ್ಪಿಸಿದ್ದಾರೆ. ಈ ವಿದ್ಯುತ್ ಕಂಬಗಳ ಕೆಲಸ ಮುಗಿದ ಬಳಿಕ ಹೆಸ್ಕಾಂನಿಂದ ಅನುಮತಿ ಪಡೆದು ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ವಿಭಾಗದಿಂದ ಇಲ್ಲಿಯವರೆಗೆ ಹೆಸ್ಕಾಂನಿಂದ ಅನುಮತಿ ಪಡೆಯುವಲ್ಲಿ ವಿಳಂಬವಾಗುತ್ತಿರುವುದರಿಂದ ವಿದ್ಯುತ್ ಕಂಬಗಳು ಬೆಳಗುತ್ತಲೆ ಇಲ್ಲ.
ಪಟ್ಟಣದಲ್ಲಿ ಏಪ್ರಿಲ್ನಲ್ಲಿ ಜಾತ್ರಾ ಮಹೋತ್ಸವ ನಿಮಿತ್ತ 4 ದಿನಗಳ ಕಾಲ ರಸ್ತೆ ಬದಿಯಲ್ಲಿನ ಎಲ್ಲ ವಿದ್ಯುತ್ ಕಂಬಗಳು ಮತ್ತು ಹೈಮಾಸ್ಟ್ ದೀಪಗಳು ಬೆಳಕು ನೀಡಿದ್ದವು. ಆದರೆ, ಜಾತ್ರೆ ಮುಗಿದ ಬಳಿಕ ಮತ್ತೆ ಕತ್ತಲು ಆವರಿಸಿದೆ. ಜಾತ್ರೆ ಮಗಿದು ಎರಡು ತಿಂಗಳಾಗುತ್ತ ಬಂದರೂ ವಿದ್ಯುದ್ದೀಪಗಳು ಬೆಳಕು ನೀಡುತ್ತಿಲ್ಲ.
ರಟ್ಟಿಹಳ್ಳಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಅಧಿಕ ಸಂಖ್ಯೆಯಲ್ಲಿ ವಾಹನಗಳು ಚಲಿಸುತ್ತಿವೆ. ರಾತ್ರಿ ವೇಳೆ ರಸ್ತೆ ಬದಿಯಲ್ಲಿ ವಿದ್ಯುದ್ಧೀಪಗಳು ಬೆಳಗದೇ ಇರುವುದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಕತ್ತಲು ಆವರಿಸುವುದರಿಂದ ಯಾವಾಗ ಬೇಕಾದರೂ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಹೆಸ್ಕಾಂ ಅಧಿಕಾರಿಗಳು ಅಳವಡಿಸಿರುವ ವಿದ್ಯುದ್ದೀಪಗಳಿಗೆ ವಿದ್ಯುತ್ ಪ್ರವಹಿಸುವಂತೆ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳಬೇಕು. | ಪ್ರಶಾಂತ ವೇರ್ಣಿಕರ ಸ್ಥಳೀಯ ನಿವಾಸಿ ರಟ್ಟಿಹಳ್ಳಿ
ರಟ್ಟಿಹಳ್ಳಿ ಪಟ್ಟಣ, ಹಾರೋಗೊಪ್ಪ ಮತ್ತು ಮಾಸೂರು ಗ್ರಾಮದ ಬಳಿ ಒಟ್ಟು 12.35 ಕಿ.ಮೀ. ರಸ್ತೆ ಅಭಿವೃದ್ಧಿ ಮತ್ತು ಗಟಾರ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತ ತಲುಪಿದೆ. ಈ ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳ ಚಾಲನೆಗೆ ಹೆಸ್ಕಾಂ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿದೆ. ಶೀಘ್ರವೇ ಅನುಮತಿ ಪಡೆದು ಚಾಲನೆ ನೀಡಲಾಗುವುದು. | ನಿಂಗಪ್ಪ ಸಹಾಯಕ ಇಂಜಿನಿಯರ್, ರಾಷ್ಟ್ರೀಯ ಹೆದ್ದಾರಿ ಉಪ-ವಿಭಾಗ ಶಿವಮೊಗ್ಗ