ಸಿಮೆಂಟ್ ಕಾಂಕ್ರೀಟ್ ಕುಸಿದು ಮಹಿಳೆ ವೃದ್ಧೆಗೆ ಗಾಯ

HUN-MAR-18-1(INJURED NAGAMMA)
ಹುಣಸೂರು ನಗರದ ತಾಲೂಕು ಕಚೇರಿಯಲ್ಲಿನ ಛಾವಣಿ ಕುಸಿದು ಗಾಯಗೊಂಡಿರುವ ಮಹಿಳೆ ನಾಗಮ್ಮ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Published on

ಹುಣಸೂರು: ನಗರದ ಬೈಪಾಸ್ ರಸ್ತೆಯಲ್ಲಿರುವ ತಾಲೂಕು ಕಚೇರಿಯಲ್ಲಿ ಸೋಮವಾರ ಛಾವಣಿಯ ಸಿಮೆಂಟ್ ಕಾಂಕ್ರೀಟ್ ಕುಸಿದು ವೃದ್ಧೆಯ ಬಲಗಾಲಿನ ಮಧ್ಯದ ಬೆರಳು ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.

ಗಾವಡಗೆರೆ ಹೋಬಳಿಯ ಕಳ್ಳಿಕೊಪ್ಪಲು ಗ್ರಾಮದ ಮಹದೇವಪ್ಪ ಅವರ ಪತ್ನಿ ನಾಗಮ್ಮ (65) ಗಾಯಗೊಂಡವರು. ಗಾವಡಗೆರೆ ಉಪ ತಹಸೀಲ್ದಾರ್ ಅರುಣ್ ಕೂಡಲೇ ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರು.

ಘಟನೆ ವಿವರ: ಮಹದೇವಪ್ಪ-ನಾಗಮ್ಮ ದಂಪತಿ ತಮ್ಮ 9 ಎಕರೆ ಜಮೀನನ್ನು ಮೂವರು ಮಕ್ಕಳಿಗೆ ವಿಭಾಗಿಸಿ ಅವರವರ ಹೆಸರಿಗೆ ನೋಂದಣಿ ಮಾಡಿಸಿಕೊಡಲು ತಾಲೂಕು ಕಚೇರಿಯಲ್ಲಿನ ನೋಂದಣಾಧಿಕಾರಿ ಕಚೇರಿಗೆ ಬಂದಿದ್ದರು. ನೋಂದಣಿ ಕಾರ್ಯ ವಿಳಂಬವಾದ ಕಾರಣ ಮಧ್ಯಾಹ್ನ 2 ಗಂಟೆಗೆ ಊಟದ ನಂತರ ನೋಂದಣಿ ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಹಾಗಾಗಿ ಕಚೇರಿಯ ಕಾರಿಡಾರ್‌ನ ತುದಿಯಲ್ಲಿ ನಾಗಮ್ಮ ಕಾಲು ನೀಡಿ ಕೂತಿದ್ದರು. ಇದ್ದಕ್ಕಿದ್ದಂತೆ ಮೊದಲ ಮಹಡಿಯ ಸಜ್ಜೆಯ ಬೃಹತ್ ಗಾತ್ರದ ಸಿಮೆಂಟ್ ಕಾಂಕ್ರೀಟ್ ನೆಲಕ್ಕೆ ಬಿದ್ದಿದೆ. ನಾಗಮ್ಮ ತಮ್ಮ ತಲೆಯನ್ನು ಹೊರಹಾಕಿ ಕುಳಿತಿದ್ದರೆ ಭಾರಿ ಅನಾಹುತವಾಗುತ್ತಿತ್ತು. ಅದೃಷ್ಟವಶಾತ್ ಕಾಲು ಚಾಚಿ ಕುಳಿತ್ತಿದ್ದರು. ಕಾಲಿನ ಬೆರಳುಗಳು ತೀವ್ರವಾಗಿ ಗಾಯಗೊಂಡವು.

ವಿಷಯ ತಿಳಿದು ಖಾಸಗಿ ಆಸ್ಪತ್ರೆಗೆ ಧಾವಿಸಿದ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರ್ ಮತ್ತು ತಹಸೀಲ್ದಾರ್ ನಯನಕುಮಾರಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು. ಘಟನೆ ಕುರಿತಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದು, ಸಂಪೂರ್ಣ ಚಿಕಿತ್ಸೆ ದೊರಕಿಸಿಕೊಡುವುದಾಗಿ ಕುಟುಂಬಸ್ಥರಿಗೆ ಭರವಸೆ ನೀಡಿದರು.

ಮಧ್ಯದ ಬೆರಳು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ತೆಗೆದುಹಾಕಲಾಗಿದೆ. ಮಿಕ್ಕ ಬೆರಳುಗಳನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಚಿಕಿತ್ಸೆ ಮಾಡಬೇಕಿದ್ದು, ಸಂಪೂರ್ಣವಾಗಿ ಉಚಿತವಾಗಿ ಚಿಕಿತ್ಸೆ ಮಾಡಿಕೊಡುವುದಾಗಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತ್ ಭರವಸೆ ನೀಡಿದರು.

ಅರ್ಧ ತಾಸು ನರಳಾಡಿದ ಹಿರಿಯ ಜೀವ: ಘಟನೆ ವಿಷಯ ತಿಳಿದರೂ ತಮ್ಮ ಕಚೇರಿಯಲ್ಲೇ ಊಟ ಮಾಡುತ್ತಿದ್ದ ಯಾವೊಬ್ಬ ಅಧಿಕಾರಿಯೂ ಹೊರಬಂದು ನೋಡಲಿಲ್ಲ. ಹಿರಿಯ ಜೀವ ನೋವಿನಿಂದ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಆಸ್ಪತ್ರೆಗೆ ಸಾಗಿಸದಿರುವುದರ ಕುರಿತು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಜಯವಾಣಿಯಲ್ಲಿ ಪ್ರಕಟಗೊಂಡಿದ್ದ ಫೋಕಸ್ ಸ್ಟೋರಿ: ಬೀಳುವ ಹಂತದಲ್ಲಿ ತಾಲೂಕು ಕಚೇರಿ ಕಟ್ಟಡ ಎಂಬ ಶೀರ್ಷಿಕೆಯಡಿ ಫೆ.28ರಂದು ವಿಜಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು. ಆದರೂ ತಾಲೂಕು ಆಡಳಿತ ದುರಸ್ತಿ ಮಾಡಿಸುವ ಗೋಜಿಗೆ ಹೋಗಲಿಲ್ಲ. ಲೋಕೋಪಯೋಗಿ ಇಲಾಖೆಯ ನಿರ್ವಹಣೆಯಡಿ ಕಟ್ಟಡವಿದ್ದು, ಇಲಾಖೆ ಅಧಿಕಾರಿಗಳು ಇತ್ತ ಮುಖ ಹಾಕುವುದೇ ಇಲ್ಲ. ಯಾರ ಬಲಿಗಾಗಿ ಕಟ್ಟಡ ಕಾದಿದೆಯೋ ಎನ್ನುವ ಆತಂಕವನ್ನು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net