

ಪುತ್ತೂರು ಗ್ರಾಮಾಂತರ: ಪರಂಪರಾಗತವಾಗಿ ಬಂದಿರುವ ನಾಟಿ ವೈದ್ಯ ಪದ್ಧತಿ ಹಾಗೂ ನಾಟಿ ವೈದ್ಯಕೀಯ ಗಿಡಮೂಲಿಕೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಪಡುವನ್ನೂರು ಗ್ರಾಮದ ಸಜಂಕಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನಮ್ಮ ನಡಿಗೆ ನಾಟಿ ವೈದ್ಯರ ಮನೆಯ ಕಡೆಗೆ’ ಎಂಬ ವಿಭಿನ್ನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಾಲಾ ವಿದ್ಯಾರ್ಥಿಗಳನ್ನು ಪಡುಮಲೆಯ ಸಸ್ಯ ಸಂಜೀವಿನಿ ನಾಟಿ ವೈದ್ಯ ವಿಶ್ವನಾಥ ಪೂಜಾರಿ ಅವರ ಮನೆಗೆ ಕರೆದುಕೊಂಡು ಹೋಗಿ ಅವರ ಮನೆಯಂಗಳದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕೆಂಪು, ಸರ್ಪಸುತ್ತು, ಪಕ್ಷವಾತ, ಕಿಡ್ನಿಯಲ್ಲಿನ ಕಲ್ಲು ಮೊದಲಾದ ಕಾಯಿಲೆಗಳಿಗೆ ಹಲವಾರು ವರ್ಷಗಳಿಂದ ಪರಂಪರಾಗತ ನಾಟಿ ಔಷಧ ನೀಡುತ್ತಾ ಬಂದಿರುವ ವಿಶ್ವನಾಥ ಪೂಜಾರಿ ಮಕ್ಕಳಿಗೆ ಮಾಹಿತಿ ನೀಡಿ, ಗಿಡಮೂಲಿಕೆ ಪರಿಚಯಿಸಿದರು.
ಎಸ್‌ಡಿಎಂಸಿ ಅಧ್ಯಕ್ಷೆ ಯಶೋಧಾ ಅಧ್ಯಕ್ಷತೆ ವಹಿಸಿದ್ದರು. ಬಡಗನ್ನೂರು ಗ್ರಾ.ಪಂ. ಸದಸ್ಯ ಕುಮಾರ್ ಅಂಬಟೆಮೂಲೆ, ಎಸ್‌ಡಿಎಂಸಿ ಉಪಾಧ್ಯಕ್ಷ ರಜಾಕ್, ಶಿಕ್ಷಕಿ ಶಶಿಕಲಾ, ಪಾಲಕ ಬಾಬು ಮತ್ತಿತರರು ಉಪಸ್ಥಿತರಿದ್ದರು.
ವಿಶ್ವನಾಥ ಪೂಜಾರಿ ಅವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು. ಪ್ರಭಾರ ಮುಖ್ಯಶಿಕ್ಷಕಿ ಸುಮಲತಾ ಪಿ.ಕೆ. ಪ್ರಾಸ್ತಾಪಿಸಿದರು.ಶಿಕ್ಷಕ ಗಣೇಶ್ ನಾಯಕ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.