ಶೈಕ್ಷಣಿಕ ವ್ಯವಸ್ಥೆ ಕಟ್ಟಿಕೊಟ್ಟ ಸಮರ್ಥ ಆಡಳಿತಗಾರ

9 - Copy
Published on

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯ

ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ಗೆ ಅಭಿನಂದನಾ ಕಾರ್ಯಕ್ರಮ

ಮೈಸೂರು: ಮೈಸೂರು ವಿವಿಗೆ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಸಮರ್ಥ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆ ಕಟ್ಟಿಕೊಟ್ಟಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅಭಿಪ್ರಾಯಪಟ್ಟರು.


ನಗರ ಕ್ರಾಫರ್ಡ್ ಭವನದಲ್ಲಿ ಸೋಮವಾರ ಪ್ರೊ.ಜಿ.ಹೇಮಂತಕುಮಾರ್ ಅಭಿನಂದನಾ ಸಮಿತಿ ವತಿಯಿಂದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಅವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾರಾದರೂ ಸಚಿವರ ಜತೆ ಓಡಾಡುತ್ತಿದ್ದರೆ ಅದು ವೈಯಕ್ತಿಕ ಕೆಲಸಕ್ಕೆ ಆಗಿರುವುದಿಲ್ಲ. ವಿವಿಗೆ ಬೇಕಾದ ಕೆಲಸ ಮಾಡುವ ಸಲುವಾಗಿ ಸದಾ ಬೆಂಗಳೂರಿಗೆ ಹೇಮಂತ ಕುಮಾರ್ ಓಡಾಡುತ್ತಿದ್ದರು. ವಿವಿಗೆ ಬೇಕಾದ ಎಲ್ಲ ಸಂಗತಿಗಳ ಬಗ್ಗೆ ಸದಾ ಯೋಚಿಸುತ್ತಿದ್ದರು. ಇಷ್ಟೆಲ್ಲಾ ಕೆಲಸ ಮಾಡಿದರೂ ಹೇಮಂತಕುಮಾರ್ ಅವರಿಗೆ ಯಾವುದೆ ಹಮ್ಮುಬಿಮ್ಮುಗಳಿಲ್ಲ. ಅವರ ಕೆಲಸ ಹೀಗೆ ನಿರಂತರವಾಗಿರಲಿ ಎಂದು ಆಶಿಸಿದರು.

ಹೇಮಂತಕುಮಾರ್ ನಗುಮೊಗದ ದಕ್ಷ ಆಡಳಿಗಾರರು. ನಾವಿಬ್ಬರು ಒಳ್ಳೆಯ ಸ್ನೇಹಿತರು. ಕೇಂದ್ರೀಯ ಭಾಷಾ ಸಂಸ್ಥಾನದ ಕೆಲಸಕ್ಕೆ ನಾನು ಮೈಸೂರಿಗೆ ಬಂದಾಗ ಪರಿಚಯ ಆಯಿತು. ನಾನು ತಲಕಾಡಿನವನು. ಮೈಸೂರಿಗೆ ಅದರದೆ ವಿಶಿಷ್ಟತೆ ಇದೆ. ಇದು ನನ್ನ ಊರು. ಇದನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಹೇಮಂತಕುಮಾರ್ ಸದಾ ಯೋಚಿಸುತ್ತಾರೆ. ಮೈಸೂರಿನ ಬಗ್ಗೆ ಅವರಿಗೆ ಅಪಾರ ಪ್ರೀತಿ ಅಕ್ಕರೆ ಎಂದು ಹೇಳಿದರು.

ಕರೊನಾ ಸಮಯದಲ್ಲಿ ಅವರು ಸಾಕಷ್ಟು ಕೆಲಸ ಮಾಡಿದರು. ಮೈಸೂರು ವಿವಿಗೆ ತನ್ನದೆ ಆದ ಪರಂಪರೆ ಇತ್ತು. ಅದಕ್ಕೆ ಎಲ್ಲೂ ಧಕ್ಕೆ ಬರದಂತೆ ಕೆಲಸ ನಿರ್ವಹಿಸಿದ್ದಾರೆ. ನಿಜಕ್ಕೂ ಹೇಮಂತ ಕುಮಾರ ಅವರು ಇಡೀ ವಿವಿಯನ್ನು ಕುಟುಂಬದಂತೆ ನೋಡಿಕೊಂಡರು. ಮಾತೃ ಹೃದಯಿಯಂತೆ ಎಲ್ಲರನ್ನೂ ಸಲಹಿದರು. ಜತೆಗೆ ಅವರ ಜೀವನ ಬೆಂಕಿಯಲ್ಲಿ ಅರಳಿದ ಹೂವಿನಂತೆ. ನಮ್ಮಿಬ್ಬರಿಗೂ ಏನೋ ಒಂದು ಅವಿನಾಭಾವ ಸಂಬಂಧ ಇದೆ ಎಂದು ತಿಳಿಸಿದರು.

ವಿಜ್ಞಾನಿ ಪ್ರೊ.ಕೆ.ಎಸ್.ರಂಗಪ್ಪ ಮಾತನಾಡಿ, 30 ವರ್ಷ ಮೀರಿದ ಸಂಬಂಧ ನನ್ನದು ಹಾಗೂ ಹೇಮಂತ ಕುಮಾರ್ ಅವರದು. ಒಂದೆರಡು ಮಾತುಗಳಲ್ಲಿ ಅದನ್ನು ಹೇಳಲು ಆಗುವುದಿಲ್ಲ. ನಿಕಟವರ್ತಿಯಾಗಿ ನಾವಿಬ್ಬರು ಕೆಲಸ ಮಾಡಿದ್ದೇವೆ. ಅಣ್ಣನಂತೆ ನನ್ನನ್ನು ಸಲಹಿದ್ದಾರೆ. ವಿದೇಶಕ್ಕೂ ಒಟ್ಟಿಗೆ ಹೋಗಿದ್ದೇವೆ. ಜತೆಗೆ ಕೆಲಸ ಮಾಡಿದ್ದೇವೆ. ಹೇಮಂತ ಕುಮಾರ್ ದೈವ ಭಕ್ತ. ಕುಲಪತಿ ಆಗಿ ಕೆಲಸ ಮಾಡುವುದು ಕಷ್ಟ. ಒಳ್ಳೆಯ ಕೆಲಸ ಮಾಡುವುದೇ ಕಷ್ಟವಾಗಿದೆ ಎಂದರು.
ವಿಜ್ಞಾನಕ್ಕೆ ಪ್ರೋತ್ಸಾಹ ನೀಡುವ ಕುಲಪತಿಗಳು ಇಂದು ಬೇಕಿದೆ. ಆದರಿಂದು ಕುಲಪತಿಗಳು ಕೆಲಸ ಮಾಡಲು ಬಿಡದೆ ತೊಂದರೆ ಕೊಡುವವರೆ ಹೆಚ್ಚಾಗಿದ್ದಾರೆ. ತೊಂದರೆ ಕೊಡುವವರು ವಿವಿಗೆ ಬರಬಾರದು. ಸ್ವಾರ್ಥ ಸಾಧನೆ ಇಟ್ಟುಕೊಂಡು ಯಾರೂ ವಿವಿಗೆ ಬರಬಾರದು. ಹೇಮಂತ ಕುಮಾರ್ ಕುಲಪತಿಗಳಾಗಿ ತಮ್ಮದೆ ಆದ ಕೆಲಸ ಮಾಡಿದ್ದಾರೆ. ರಂಗಪ್ಪ ಹೇಳಿದರೆ ಹೇಮಂತ ಕುಮಾರ ಸಹಿ ಮಾಡುತ್ತಾರೆ ಎಂಬುದೆಲ್ಲಾ ಸುಳ್ಳು. ಅವರ ಆಡಳಿತಾತ್ಮಕ ಕೆಲಸಕ್ಕೆ ನಾನೆಂದು ಅಡ್ಡಿಪಡಿಸಿಲ್ಲ. ಇದು ಎಲ್ಲ ಕುಲಪತಿಗಳ ಮೇಲೆ ಇಂತಹ ಆರೋಪ ಸಹಜ ಎಂದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮೈಸೂರು ವಿವಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ.ಎಸ್.ಎನ್.ಹೆಗ್ಡೆ, ಮಾಜಿ ಕುಲಪತಿಗಳಾದ ಪ್ರೊ.ಎನ್.ಎಸ್.ರಾಮೇಗೌಡ, ಪ್ರೊ.ಆರ್.ನಿರಂಜನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net