ಪತ್ರ ಬರೆದು ಅನುದಾನ ರದ್ದು ಮಾಡಿಸಿಕೊಂಡ ಶಿಕ್ಷಣ ಸಂಸ್ಥೆ

School Strike
Published on

ಕಾರವಾರ: ಸರ್ಕಾರದ ವೇತನಾನುದಾನಕ್ಕಾಗಿ ರಾಜ್ಯದ ಸಾಕಷ್ಟು ಖಾಸಗಿ ಶಾಲೆಗಳು ಅರ್ಜಿ ಗುಜರಾಯಿಸಿಕೊಂಡು ಕಾಯುತ್ತಿವೆ. ಸರ್ಕಾರದ ಮೇಲೆ ಒತ್ತಡ ತರುತ್ತಿವೆ.

ಆದರೆ, ಇಲ್ಲೊಂದು ಶಾಲೆ ತಮಗೆ ಹಲವು ವರ್ಷಗಳಿಂದ ಇದ್ದ ವೇತನಾನುದಾನವನ್ನು ಸರ್ಕಾರಕ್ಕೆ ಸ್ವತಃ ಪತ್ರ ಬರೆದು ರದ್ದು ಮಾಡಿಸಿಕೊಂಡಿದೆ. ಆದರೆ, ಈ ವಿಚಾರ ಪಾಲಕರ ಕೆಂಗಣ್ಣಿಗೆ ಗುರಿಯಾಗಿದೆ.

ಪೂರ್ವ ಮಾಹಿತಿ ಇಲ್ಲದೇ ಅನುದಾನಿತ ಶಾಲೆಯನ್ನು ಅನುದಾನರಹಿತವಾಗಿ ಮಾಡಿಕೊಂಡ ನಗರದ ಸೇಂಟ್ ಮೈಕಲ್ ಶಾಲೆಯ ಆಡಳಿತ ಮಂಡಳಿಯ ಕ್ರಮವನ್ನು ಖಂಡಿಸಿ ಪಾಲಕರು ನಗರದ ಬಿಇಒ ಕಚೇರಿಯ ಎದುರು ಶನಿವಾರ ಸೇರಿ ಪ್ರತಿಭಟಿಸಿದರು.
ಸೇಂಟ್ ಮೈಕಲ್ ಶಾಲೆಯಲ್ಲಿ ಎಲ್‌ಕೆಜಿಯಿಂದ 10 ನೇ ತರಗತಿಯವರೆಗೆ ಶಿಕ್ಷಣವಿದ್ದರೂ 6 ರಿಂದ 10 ನೇ ತರಗತಿಯವರೆಗೆ ಸರ್ಕಾರದ ಅನುದಾನಕ್ಕೆ ಒಳಪಟ್ಟಿತ್ತು.

ಆದರೆ, ಆಡಳಿತ ಮಂಡಳಿಯು ಪಾಲಕರ ಅಭಿಪ್ರಾಯ ಕೇಳದೇ ನಮಗೆ ಸರ್ಕಾರದ ಅನುದಾನ ಬೇಡ ಎಂದು ಕೆಲ ತಿಂಗಳ ಹಿಂದೆ ಶಿಕ್ಷಣ ಇಲಾಖೆಗೆ ಪತ್ರ ನೀಡಿದೆ.

ಪರಿಣಾಮ ಜೂನ್ 17 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಶ್ವತವಾಗಿ ಶಾಲೆಯ ವೇತನ ಅನುದಾನವನ್ನು ಬಂದ್ ಮಾಡಿದೆ. ಇದರಿಂದ 850 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಎಲ್ಲ ಮಕ್ಕಳು ಸರ್ಕಾರ ಬಿಸಿಯೂಟ, ಸಮವಸ್ತ್ರ, ಉಚಿತ ಎನ್‌ಸಿಸಿ ತರಬೇರಿ ಮುಂತಾದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಶಾಲೆಯ ಶುಲ್ಕವೂ ಹೆಚ್ಚುವ ಆತಂಕವಿದೆ.
ಶಾಲೆಯ ಆಡಳಿತ ಮಂಡಳಿ ಮೊದಲು ಪಾಲಕರಿಗೆ ಯಾವುದೇ ಮಾಹಿತಿ ನೀಡದೇ, ಅವರ ಅಭಿಪ್ರಾಯ ಪಡೆಯದೇ ಮೋಸ ಮಾಡಿದೆ. ಬೇರೆ ಸಭೆಯೊಂದರ ಸಂದರ್ಭದಲ್ಲಿ ಪಡೆಯಲಾದ ಸಹಿಯನ್ನು ಶಾಲೆ ಅನುದಾನ ರದ್ದತಿಗೆ ಪಾಲಕರಿಂದ ಪಡೆಯಲಾಗಿದೆ ಎಂದು ಬಿಂಬಿಸಿ ಶಿಕ್ಷಣ ಇಲಾಖೆಗೆ ಅನುದಾನ ರದ್ದತಿಗೆ ಅರ್ಜಿ ಹಾಕಿರುವುದು ಬಹಿರಂಗವಾಗಿದೆ ಎಂದು ಆಕ್ಷೇಪಿಸಿದರು.

ಬಿಇಒ ಚಂದ್ರಹಾಸ ರಾಯ್ಕರ್ ಮಾತನಾಡಿ, `ಶಾಲೆಯಲ್ಲಿ 6 ರಿಂದ 10 ನೇ ತರಗತಿಯವರೆಗೆ ವೇತನಾನುದಾನಕ್ಕೆ ಒಳಪಟ್ಟಿತ್ತು. ಪ್ರಾಥಮಿಕ ಹಂತದಲ್ಲಿ ಒಬ್ಬ ಸಹ ಶಿಕ್ಷಕಿ ಮತ್ತು ಪ್ರೌಢ ಹಂತದಲ್ಲಿ ಒಬ್ಬ ಡಿ ದರ್ಜೆಯ ನೌಕರರ ಮಾತ್ರ ವೇತನಾನುದಾನಕ್ಕೆ ಒಳಪಟ್ಟಿದ್ದರು.

ಉಳಿದ ಶಿಕ್ಷಕರಿಗೆ ಆಡಳಿತ ಮಂಡಳಿ ವೇತನ ನೀಡಬೇಕಿದೆ. ಶಿಕ್ಷಣ ಗುಣಮಟ್ಟ ಕಾಪಾಡುವ ದೃಷ್ಟಿಯಿಂದ ಅನುದಾನ ರದ್ದತಿಗೆ ಕ್ರಮ ವಹಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ಸರ್ಕಾರಕ್ಕೆ ಪತ್ರ ನೀಡಿದೆ.

ಸೆ.6 ರಂದು ಶಾಲೆಯಲ್ಲಿ ಪಾಲಕರು, ಆಡಳಿತ ಮಂಡಳಿ ಹಾಗೂ ಶಿಕ್ಷಣಾಧಿಕಾರಿಗಳ ಜಂಟಿ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪಾಲಕರು ವಾಪಸಾದರು. ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net