

ಹಾನಗಲ್ಲ: ಹಾನಗಲ್ಲ ತಾಲೂಕಿನ ದ್ಯಾಮನಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಎಸ್.ಎಫ್. ಕಠಾರಿ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಾಲೂಕಿನ ಬೈಚವಳ್ಳಿ ಗ್ರಾಮದ ಕಠಾರಿಯವರು, ಹಾವೇರಿ ತಾಲೂಕಿನ ವೀರಾಪುರದ ಶಾಲೆಯಲ್ಲಿ ಶಿಕ್ಷಕರಾಗಿ 6 ವರ್ಷ ಸೇವೆ ಸಲ್ಲಿಸಿ ಹಾನಗಲ್ಲ ತಾಲೂಕಿಗೆ ವರ್ಗಾವಣೆಗೊಂಡಾಗ ಅಲ್ಲಿನ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದರು. ಅದು ಅವರು ಮುಗ್ಧ ಮನಸುಗಳನ್ನು ಗೆದ್ದಿದ್ದಕ್ಕೆ ಸಾಕ್ಷಿಯಾಗಿತ್ತು.
ಹಾನಗಲ್ಲ ತಾಲೂಕಿನ ಹುಲಗಿನಹಳ್ಳಿ ಮತ್ತು ನಿಟಗಿನಕೊಪ್ಪ ಗ್ರಾಮಗಳಲ್ಲಿ ತಲಾ ಆರು ವರ್ಷ ಶಿಕ್ಷಕನಾಗಿ ನೂರಾರು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ದ್ಯಾಮನಕೊಪ್ಪ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲದೆ, ಕೇವಲ ನಿಯೋಜನೆಗೊಂಡ ಶಿಕ್ಷಕರ ಮೇಲೆ ನಡೆಯುವ ಪರಿಸ್ಥಿತಿಯಿತ್ತು. ಶಾಲೆಯ ಸುತ್ತ ವಿಶಾಲವಾದ ಜಾಗವಿದ್ದರೂ ಕಸ ಬೆಳೆದು ನಿಂತಿತ್ತು. ಅದನ್ನೆಲ್ಲ ಸ್ವಚ್ಛಗೊಳಿಸಿ, ಅಲ್ಲೊಂದು ಉದ್ಯಾನವನ ನಿರ್ಮಿಸಿ, ತೆಂಗಿನ ಗಿಡ ನೆಟ್ಟು, ವಿವಿಧ ಹಣ್ಣು-ತರಕಾರಿ ಬೆಳೆಯಲಾರಂಭಿಸಿದರು. ಇದು ಗ್ರಾಮಸ್ಥರ ಗಮನ ಸೆಳೆಯಿತು.
ಇಲ್ಲಿನ ಎಲ್ಲ ಮಕ್ಕಳು ಕನ್ನಡ ಹಾಗು ಇಂಗ್ಲಿಷ್‌ನಲ್ಲಿ ಇಪ್ಪತ್ತರವರೆಗೆ ಮಗ್ಗಿ ಹೇಳುವುದಲ್ಲದೆ, ಮಗ್ಗಿಯನ್ನು ಕೆಳಗಿನಿಂದ ಮೇಲಕ್ಕೂ ಹೇಳುತ್ತಾರೆ. ಪ್ರತಿಭಾ ಕಾರಂಜಿ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರತಿ ವರ್ಷ ವಿವಿಧ ವಸತಿ ಶಾಲೆಗೆ ಇಲ್ಲಿಯ ಮಕ್ಕಳು ಆಯ್ಕೆಯಾಗುತ್ತಿದ್ದಾರೆ.
ಗ್ರಾಮಸ್ಥರ ಮನವೊಲಿಸಿದ ಶಿಕ್ಷಕ ಕಠಾರಿ ಶಾಲೆಗೆ ದಾನಿಗಳಿಂದ ಸುಮಾರು ಹನ್ನೆರಡು ಲಕ್ಷ.ರೂ ಮೌಲ್ಯದ ವಸ್ತುಗಳನ್ನು ಪಡೆದಿದ್ದಾರೆ. ಈ ಶಾಲೆಯು ಪರಿಸರ ಇಲಾಖೆಯಿಂದ ಕಿತ್ತಳೆ ಶಾಲೆ, ಹಸಿರು ಶಾಲೆ, ಪರಿಸರ ಮಿತ್ರ ಶಾಲೆ ಎಂಬ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಶಿಕ್ಷಕ ಎಸ್.ಎಫ್.ಕಠಾರಿ ಅವರಿಗೆ ಈಗಾಗಲೇ ತಾಲೂಕು ಮತ್ತು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಳು ಬಂದಿವೆ. ಜನಮೆಚ್ಚಿದ ಶಿಕ್ಷಕ. ರಾಜ್ಯಮಟ್ಟದ ಉತ್ತಮ ನಲಿ-ಕಲಿ ಶಿಕ್ಷಕ. ಹುಬ್ಬಳ್ಳಿಯ ರೋಟರಿ ಕ್ಲಬ್ ವತಿಯಿಂದ ಉತ್ತಮ ರಾಷ್ಟ್ರನಿರ್ಮಾತೃ ಶಿಕ್ಷಕ ಪ್ರಶಸ್ತಿ. ಹಾವೇರಿ ಜಿಲ್ಲಾ ಸೂಫಿ ಸೊಸೈಟಿಯ ವತಿಯಿಂದ ಉತ್ತಮ ಸಮಾಜ ನಿರ್ಮಾತೃ ಶಿಕ್ಷಕ ಪ್ರಶಸ್ತಿಗಳೂ ಇವರ ಮುಡಿಗೇರಿವೆ. ಇದೀಗ ರಾಜ್ಯ ಮಟ್ಟದ ಪ್ರಶಸ್ತಿಯೂ ಬಂದಿರುವುದು ಶಿಕ್ಷಕ ವೃತ್ತಿಯಲ್ಲಿನ ಅವರ ಆಸಕ್ತಿ, ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ.
ನಾನು ಕಾರ್ಯ ನಿರ್ವಹಿಸಿದ ಶಾಲೆಗಳಲ್ಲಿ ನೂರಾರು ವಿದ್ಯಾರ್ಥಿಗಳು ನನ್ನನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮೆಚ್ಚುಗೆ ಗಳಿಸಿದ್ದೇನೆ. ಆಯಾ ಶಾಲೆಗಳ ಅಭಿವೃದ್ಧಿಗೆ, ಮಕ್ಕಳ ಶೈಕ್ಷಣಿಕ ಉನ್ನತಿಗೆ ಶ್ರಮಿಸಿದ್ದೇನೆ. ಅವೆಲ್ಲವನ್ನೂ ಪರಿಗಣಿಸಿ ಸರ್ಕಾರ ನನ್ನನ್ನು ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಳಿಸಿರುವುದು ಸಂತಸ ತಂದಿದ್ದೇನೆ. ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. I ಎಸ್.ಎಫ್. ಕಠಾರಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ