ಗಮನ ಸೆಳೆದ ಸಹಸ್ರ ಕಂಠ ಗಾಯನ ಕಾರ್ಯಕ್ರಮ

kasapa
Published on

ಮಡಿಕೇರಿ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಕುವೆಂಪು ರಚಿಸಿರುವ ನಾಡಗೀತೆಗೆ ನೂರು ವರ್ಷ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಶನಿವಾರ ನಡೆಯಿತು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನೋತ್ಸವ ಹಾಗೂ ಕುವೆಂಪು ರಚಿತ ನಾಡಗೀತೆ ಆಶಯಕ್ಕೆ ನೂರು ವರ್ಷ ಪ್ರಯುಕ್ತ ನಾಡಗೀತೆ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಜರುಗಿತು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ನಾಡು ಕಂಡ ಶ್ರೇಷ್ಠ ಕವಿ ಕುವೆಂಪು ಅವರು ನಾಡಗೀತೆ ರಚಿಸಿ ನೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲಾ ಕಾಲೇಜು ಹಂತದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕುವೆಂಪು ಅವರು ನಾಡಿಗೆ ನೀಡಿದ ಕೊಡುಗೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

೧೯೨೫ರ ಸುಮಾರಿಗೆ ಭಾರತ ಒಂದು ಗಣರಾಜ್ಯವಾಗಿ ಭಾಷಾವಾರು ಪ್ರಾಂತ್ಯ ರಚನೆ, ಕನ್ನಡ ನಾಡು ಏಕೀಕರಣವಾಗಿ ಕರ್ನಾಟಕ ಹೆಸರು ನಾಮಕರಣ ಹೀಗೆ ಕನ್ನಡ ನಾಡು, ಭಾಷೆ ಬೆಳವಣಿಗೆಗೆ ಕುವೆಂಪು ಅವರು ಶ್ರಮಿಸಿದ್ದಾರೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ರೂಪಾಂಶ ಭಾವ, ಭಾಷೆ ಬದಲಾಗಿದ್ದರೂ ಮೂಲ ಆಶಯ ಮಾತ್ರ ಮೂಲದ್ದೇ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಮೂಲದ ಪಚ್ಚೆಯ ನವ ಕಂಠೀಮಾಲೆ ಯಂತಹ ಉಕ್ತಿಗೆ ಬದಲಾಗಿ ಹಸುರಿನ ಗಿರಿಗಳ ಸಾಲೆ ನಿನ್ನಯ ಕೊರಳಿನ ಮಾಲೆ ಎಂಬಂತಹ ಸಾಲುಗಳು ಬಂದಿರುವುದು ಅವರ ಭಾವ ಬೆಳವಣಿಗೆಯ ಸಂಕೇತವಾಗಿದೆ ಎಂದು ಅವರು ವಿವರಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಕೆ.ಮಂಜುಳ ಮಾತನಾಡಿ, ಭಾರತ ಜನನಿಯ ತನುಜಾತೆ ಮತ್ತು ಸರ್ವ ಜನಾಂಗದ ಶಾಂತಿಯ ತೋಟ ಈ ನಾಡಗೀತೆಯ ಮೂಲ ಆಶಯಗಳೆಂಬುದು ಸ್ಪಷ್ಟಪಡಿಸಿರುವಂತೆ, ಕನ್ನಡ ನಾಡಿನ ವಿಸ್ತೀರ್ಣವನ್ನು ಚದರ ಮೈಲಿಗಳಲ್ಲಿ ಅಳೆಯುವುದಕ್ಕಿಂತ ಚದರ ವರ್ಷಗಳಲ್ಲಿ ಅಳೆಯಬೇಕಾಗಿದೆ. ನಾಡು ಅಥವಾ ದೇಶ ಎಂದರೆ ಅದರ ಭೂಭಾಗ ಮಾತ್ರವಲ್ಲ. ಅದರ ಜನ-ಭಾಷೆ-ಸಂಸ್ಕೃತಿ ಎಲ್ಲವೂ ಸೇರುತ್ತದೆ. ಇವು ತಮ್ಮ ತನವನ್ನು ಉಳಿಸಿಕೊಂಡು ವಿಶ್ವಾತ್ಮಕವಾಗುವ ಆಶಯಗಳೆಂದರೂ ತಪ್ಪಾಗುವುದಿಲ್ಲ. ಮುಂದೆ ಅವರೇ ಪ್ರತಿಪಾದಿಸಿದ ವಿಶ್ವಮಾನವ ಸಂದೇಶಕ್ಕೂ ಆಶಯಗಳಾಗಿವೆ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ರಂಗಧಾಮಪ್ಪ ಮಾತನಾಡಿ, ಕನ್ನಡ ನಾಡು ಕಟ್ಟುವಲ್ಲಿ ಕುವೆಂಪು ಅವರು ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿ ವಿಶ್ವಮಾನವ ಸಂದೇಶವನ್ನು ನೀಡಿದ್ದಾರೆ ಎಂದರು.

ರಸಖುಷಿ ಕವಿಯಾದ ಕುವೆಂಪು ಅವರು ನಾಡಿನ ಸರ್ವತೋಮುಖ ಬೆಳವಣಿಗೆಗೆ ಸಾಹಿತ್ಯದ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ. ಕುವೆಂಪು ಅವರು ಕನ್ನಡನಾಡು ಭಾರತ ಮಾತೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ನಾಡಗೀತೆಯಲ್ಲಿ ವಿವರಿಸಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ, ಪ್ರೌಢಶಾಲೆ ಮುಖ್ಯೋಪಾಧ್ಯಾಯ ಕೆ.ವಿ.ಶಶಿಕಲಾ, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸುಶೀಲ, ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಟಿ.ಶಿವಶಂಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net