

ಮೈಸೂರು: ಮೈಸೂರು ತಾಲೂಕಿನ ಜಯಪುರ ಹೋಬಳಿ ಕಲ್ಲಹಳ್ಳಿ ಗ್ರಾಮದ ಸರ್ವೇ ನಂಬರ್ 98ರ ಸರ್ಕಾರಿ ಖರಾಬು ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಬಡ ದಲಿತ ಕುಟುಂಬದ ರಂಗಯ್ಯ ಹಾಗೂ ಜಯಮ್ಮ ಕುಟುಂಬವನ್ನು ಒಕ್ಕಲೆಬ್ಬಿಸುವ ಯತ್ನ ನಡೆಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ದಾಖಲೆ ಪರಿಶೀಲಿಸಿ ಬಡ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕರ್ನಾಟಕ ರೈತ ಸಂಘದ(ಎಐಕೆಕೆಎಸ್) ಅಧ್ಯಕ್ಷ ಕಂದೇಗಾಲ ಶ್ರೀನಿವಾಸ್ ಒತ್ತಾಯಿಸಿದರು.
ಮೈಸೂರು ಸುತ್ತಮುತ್ತ ಹಾಗೂ ತಾಲೂಕಿನಾದ್ಯಂತ ಭೂ ದಂಧೆಕೋರರು ಈ ರೀತಿ ಅಮಾಯಕರ ಕುಟುಂಬಗಳ ಆಸ್ತಿ, ಗೋಮಾಳ, ಖರಾಬು ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರ ಆಸ್ತಿ ಕಬಳಿಸುತ್ತಿದ್ದಾರೆ. ಇಲ್ಲಿಯೂ ಇದೇ ರೀತಿ ಆಗಿದೆ.
ಕಲ್ಲಹಳ್ಳಿ ಗ್ರಾಮದ ಸರ್ವೇ ನಂ.98ರ 370 ಎಕರೆ ಸರ್ಕಾರಿ ಖರಾಬು ಜಮೀನಿದ್ದು, ರಂಗಯ್ಯ ಮತ್ತು ಜಯಮ್ಮ ಅವರ ತಾಯಿಯ ಹೆಸರಿಗೆ ಎರಡು ಎಕರೆ ಮಂಜೂರಾಗಿದೆ. 2017ರಲ್ಲಿ ರಂಗಯ್ಯ ಫಾರ್ಮ್ ನಂ.57ನ್ನು ತುಂಬಿದ್ದು, ಈಗಲೂ ಸ್ವಾಧೀನಾನುಭವದಲ್ಲಿ ತಮ್ಮ ತಂದೆ ಕಾಲದಿಂದಲೂ ವ್ಯವಸಾಯ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
ಈ ಹಿಂದೆ ಇದನ್ನು ಕಬಳಿಸಲು ನಡೆಸಿದ್ದ ಯತ್ನದ ವೇಳೆಯೇ ರಂಗಯ್ಯ ಮತ್ತು ಜಯಮ್ಮ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಹೀಗಿದ್ದರೂ ಪ್ರಭಾವಿಗಳು ಸೇರಿಕೊಂಡು ಅವರ ಆಸ್ತಿ ಕಬಳಿಸುವ ಯತ್ನ ನಡೆಸಿದ್ದಾರೆ. ಹೀಗಾಗಿ ಸಂಬಂಧಿತ ಅಧಿಕಾರಿಗಳು ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಸಂಘದ ಮಂಡಕಳ್ಳಿ ಮಹೇಶ್, ಬೊಕ್ಕಳ್ಳಿ ನಂಜುಂಡಸ್ವಾಮಿ, ನಾಗನಹಳ್ಳಿ ವಿಜೇಂದ್ರ, ದಸಂಸ ತಾಲೂಕು ಸಂಚಾಲಕ ಕಲ್ಲಹಳ್ಳಿ ಕುಮಾರ್ ಇನ್ನಿತರರಿದ್ದರು.