ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಪ್ರಯತ್ನ

mysore
Published on

ಮೈಸೂರು: ಸಂವಿಧಾನದ ಆಶಯಗಳಿಗೆ ಧಕ್ಕೆ ತರುವ ಪ್ರಯತ್ನಗಳು ನಡೆದಿವೆ. ಇದರ ವಿರುದ್ಧ ಹೋರಾಟ ರೂಪಿಸಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.


ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನದ ಆಶಯಗಳಿಗೆ ಅಪಾಯ ಉಂಟು ಮಾಡುವ ಕೆಲಸವಾಗುತ್ತಿದೆ. ರಾಜಕೀಯ ಕಾರಣಕ್ಕಾಗಿ ಸಾರ್ವಜನಿಕರ ಬದುಕನ್ನು ಮಲಿನಗೊಳಿಸಲಾಗುತ್ತಿದೆ. ಇಂತಹ ದುಷ್ಟ ಶಕ್ತಿಗಳನ್ನು ಧಿಕ್ಕರಿಸುವ ಕೆಲಸವಾಗಬೇಕಿದೆ ಎಂದರು

ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ನಡೆಯುತ್ತಿದೆ. ಸೌಹಾರ್ದತೆ, ಶಾಂತಿ, ಸಹೋದರತ್ವ, ಸಹಬಾಳ್ವೆಗೆ ಕುಂದುಂಟು ಮಾಡಲಾಗುತ್ತಿದೆ. ಇದಕ್ಕೆ ಗಾಂಧಿವಾದ ಮದ್ದಾಗಿದೆ. ಇದರ ಹೊರತಾಗಿ ಕಷ್ಟಪಟ್ಟು ಪಡೆದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಮತ್ತೊಂದು ಸ್ವಾತಂತ್ರೃ ಸಂಗ್ರಾಮದ ಅಗತ್ಯ ಇದೆ ಎಂದರು.

ಗಾಂಧೀಜಿಯನ್ನು ಹತ್ಯೆ ಮಾಡಿದವರ ಪರ ಇರುವವರು ಮಹನೀಯರ ಚಿಂತನೆ ನಾಶಮಾಡಲು ಹುನ್ನಾರ ನಡೆಸುತ್ತಿದ್ದಾರೆ. ಆದರೆ, ಗಾಂಧಿ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಿದೆ ಎಂದರು.

ಶಾಸಕ ಕೆ.ಹರೀಶ್‌ಗೌಡ, ಎಂಎಲ್‌ಸಿ ಡಾ.ತಿಮ್ಮಯ್ಯ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರಾಧ್ಯಕ್ಷ ಆರ್.ಮೂರ್ತಿ ಇನ್ನಿತರರಿದ್ದರು

ಸ್ವಾತಂತ್ರ್ಯದೆಡೆಗೆ ಕಾಂಗ್ರೆಸ್ ನಡಿಗೆ

ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನಕ್ಕೆ ನೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ನೆನಪಿಗಾಗಿ ಕಾಂಗ್ರೆಸ್ ಕಾರ್ಯಕರ್ತರು ರಾಮಸ್ವಾಮಿ ವೃತ್ತದಿಂದ ಕಾಂಗ್ರೆಸ್ ಕಚೇರಿ ವರೆಗೆ ಸ್ವಾತಂತ್ರ್ಯದೆಡೆಗೆ ಕಾಂಗ್ರೆಸ್ ನಡಿಗೆ ಎಂಬ ಘೋಷ ವಾಕ್ಯದೊಂದಿಗೆ ಜಾಥಾ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net