ಹೆಗ್ಗಡೆ ಹೆಸರಿಗೆ ಮಸಿ ಬಳಿಯುವ ಯತ್ನ

Eshwarappa K S
Published on

ಶಿವಮೊಗ್ಗ: ಧರ್ಮಸ್ಥಳ ವಿಚಾರವನ್ನು ಮುಂದಿಟ್ಟುಕೊಂಡು ಆ ಕ್ಷೇತ್ರ ಹಾಗೂ ಪೂಜ್ಯರಾದ ವೀರೇಂದ್ರ ಹೆಗ್ಗಡೆ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

ಅನಾಮಿಕ ವ್ಯಕ್ತಿಯೋರ್ವ ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂದು ದೂರು ನೀಡಿದ್ದ. ಆದರೆ ಆತನ ಹೇಳಿಕೆಗೆ ಯಾವುದೇ ಆಧಾರವಿಲ್ಲ ಎಂಬುದು ಈಗ ಸಾಭೀತಾಗುತ್ತಿದೆ. ಓರ್ವ ವ್ಯಕ್ತಿ ನೂರಾರು ಹೆಣ ಹೂಳಲು ಹೇಗೆ ಸಾಧ್ಯ? ಮೊದಲು ಆ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆಸಬೇಕೆಂದು ಆಗ್ರಹಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನಾವಳಿಗಳನ್ನು ಗಮನಿಸಿದರೆ ದೊಡ್ಡ ಷಡ್ಯಂತ್ರ ಇರುವ ಅನುಮಾನ ಬರುತ್ತದೆ. ಅನಾಮಿಕನೊಂದಿಗೆ ಇನ್ನೂ ಹಲವರು ಭಾಗಿಯಾಗಿದ್ದಾರೆ. ಸರ್ಕಾರ ಅವರೆಲ್ಲರನ್ನೂ ಪತ್ತೆ ಹಚ್ಚಿ ಬಂಧಿಸಬೇಕು. ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಈ ಹಿಂದೆ ಕುಕ್ಕರ್ ಬಾಂಬ್ ಸ್ಫೋಟಸ್ ತನಿಖೆ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ಷುಲ್ಲಕ ಹೇಳಿಕೆ ನೀಡಿದ್ದರು. ಇದು ಕೋಮುಭಾವನೆ ಕೆರಳಿಸುವ ಪ್ರಯತ್ನ ಎಂದಿದ್ದರು. ಈಗ ಧರ್ಮಸ್ಥಳದಲ್ಲಿ ಬಾಂಬ್ ಇರಿಸುವ ಪ್ರಯತ್ನ ನಡೆದಿತ್ತು ಎಂಬ ವಿಷಯ ಬಹಿರಂಗಗೊಂಡಿದೆ. ಡಿಕೆಶಿ ಈಗ ಏನು ಹೇಳುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಸರ್ಕಾರ ಪುಣ್ಯ ಕ್ಷೇತ್ರವನ್ನು ರಕ್ಷಿಸುವ ಕೆಲಸ ಮಾಡಬೇಕು. ಇಲ್ಲದೇ ಹೋದರೆ ಜನರೇ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಈಶ್ವರಪ್ಪ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net