

ಬೆಂಗಳೂರು: ರಾಜ್ಯದಲ್ಲೇ ಹೆಚ್ಚು ಸಂಖ್ಯೆ ಹೊಂದಿರುವ "ವೀರಶೈವ ಸಮುದಾಯ'ವನ್ನು ತುಳಿಯುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು "ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ'ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದಲ್ಲಿರುವ ಅಂದಾಜು 7 ಕೋಟಿ ಜನಸಂಖ್ಯೆ ಪೈಕಿ ಶೇ.17ರಷ್ಟು ವೀರಶೈವ-ಲಿಂಗಾಯತ ಜನಾಂಗ ಅತಿ ದೊಡ್ಡ ಜಾತಿಯಾಗಿ ಮೊದಲ ಸ್ಥಾನದಲ್ಲಿದ್ದರೆ, ಒಕ್ಕಲಿಗ ಜನಾಂಗ 2ನೇ ಸ್ಥಾನದಲ್ಲಿದೆ. ನಂತರ ಸ್ಥಾನಗಳಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗ, ದಲಿತರು ಸೇರಿ ಇತರೆ ಪಂಗಡಗಳಿವೆ. 10 ವರ್ಷಗಳ ಹಿಂದೆ ಜಾತಿ ಗಣತಿ ಸಮೀಕ್ಷೆಗೆ ಕಾಂತರಾಜು ಆಯೋಗವನ್ನು ರಚಿಸಲಾಗಿತ್ತು. ಅಂದಿನಿಂದ ಈವರೆಗೆ ಸಾಕಷ್ಟು ಬದಲಾವಣೆಗಳಾಗಿವೆ. ವಾಸ್ತವ ಹೀಗಿರುವಾಗ ಸಿಎಂ ಸಿದ್ದರಾಮಯ್ಯ ಅವರು, ಸಚಿವ ಸಂಪುಟದಲ್ಲಿ ವರದಿ ಅಂಗೀಕರಿಸುವುದಾಗಿ ಹೇಳಿದ್ದಾರೆ. ಆಡಳಿತ ಪಕ್ಷದಲ್ಲೇ ಡಿಸಿಎಂ, ಸಚಿವರು, ಸಂಸದರ ಸೇರಿ ಅನೇಕ ಶಾಸಕರು ಒಂದಿಲ್ಲೊಂದು ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ, ವರದಿ ಅವೈಜ್ಞಾನಿಕವಾಗಿದೆ ಎಂಬುದು ಬಹುತೇಕ ಅಭಿಪ್ರಾಯವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಸರ್ಕಾರದ ಮಾಡುವ ಕಾರ್ಯವನ್ನು ವೀರಶೈವ ಮಠಗಳು ಎಲ್ಲ ಜನಾಂಗದ ವಿದ್ಯಾರ್ಥಿಗಳಿಗೆ ಶಿಕ್ಷಣ, ಊಟ, ವಸತಿ ಸೇರಿ ಉದ್ಯೋಗ ನೀಡುತ್ತಿವೆ. ಇಷ್ಟೆಲ್ಲಾ ಸೌಲಭ್ಯ ಕಲ್ಪಿಸುತ್ತಿರುವ ನಮ್ಮ ಜನಾಂಗವನ್ನು ಸರ್ಕಾರವು ತುಳಿಯುತ್ತಿದೆ. ವೀರಶೈವ, ಒಕ್ಕಲಿಗರ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಸಮರ್ಪಕವಾಗಿ ಜಾತಿ ಗಣತಿಯ ಸಮೀಕ್ಷೆ ನಡೆಸಿಲ್ಲ. ಜಾತಿ ಗಣತಿಯನ್ನು ನಮ್ಮ ಸಮುದಾಯ ಎಂದಿಗೂ ವಿರೋಧಿಸುವುದಿಲ್ಲ. ಆದರೆ, ವೈಜ್ಞಾನಿಕವಾಗಿ ಸಮೀಕ್ಷೆ ನಡೆಸುವ ಮೂಲಕ ವರದಿ ಮಂಡಿಸಬೇಕು. ರಾಜಕೀಯ ದುರುದ್ದೇಶದಿಂದ ವರದಿಯನ್ನು ಮಂಡಿಸಬಾರದು ಎಂದು ವೀರಶೈವ&ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ಹೇಳಿದ್ದಾರೆ.