ಧಾರ್ಮಿಕ ಕ್ಷೇತ್ರಕ್ಕೆ ಮಸಿ ಬಳಿಯುವ ಯತ್ನ

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರದ ವಿರುದ್ಧ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಧರ್ಮಸ್ಥಳ ಸತ್ಯಯಾತ್ರೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಪರಮ ಕೃಷ್ಣೇಗೌಡ, ಹಿರಿಬಿಳ್ತಿ ಯೋಗೇಶ್, ಸಿಂಹಾದ್ರಿ ಮಂಜಣ್ಣ, ಪರಮ ದೇವರಾಜೇಗೌಡ ಇತರರು ಇದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರದ ವಿರುದ್ಧ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಧರ್ಮಸ್ಥಳ ಸತ್ಯಯಾತ್ರೆಗೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು. ಪರಮ ಕೃಷ್ಣೇಗೌಡ, ಹಿರಿಬಿಳ್ತಿ ಯೋಗೇಶ್, ಸಿಂಹಾದ್ರಿ ಮಂಜಣ್ಣ, ಪರಮ ದೇವರಾಜೇಗೌಡ ಇತರರು ಇದ್ದರು.
Published on

ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ, ಷಡ್ಯಂತ್ರದ ಸತ್ಯ ಹೊರಬರಲು ಎನ್‌ಐಎ ತನಿಖೆ ನಡೆಯಬೇಕೆಂದು ಶಾಸಕ ಸಿ.ಎನ್. ಬಾಲಕೃಷ್ಣ ಆಗ್ರಹಿಸಿದರು.

ಪಟ್ಟಣದ 40 ಅಡಿ ಆಂಜನೇಯ ದೇವಾಲಯದ ಆವರಣದಲ್ಲಿ ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿರುವ ಧರ್ಮಸ್ಥಳ ಸತ್ಯಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಧರ್ಮಸ್ಥಳ ಶತಮಾನಗಳಿಂದ ಹಿಂದುಗಳ ಶ್ರದ್ಧಾ ಕೇಂದ್ರವಾಗಿದ್ದು, ಇದಕ್ಕೆ ಕಪ್ಪು ಮಸಿ ಬಳಿಯುವ ಯತ್ನ ನಡೆಯುತ್ತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ವಿರುದ್ಧದ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ಎಸ್‌ಐಟಿ ತನಿಖೆ ನಡೆಸುತ್ತಿದೆ. ಆದರೆ ತನಿಖೆ ನಡೆಯುತ್ತಿರುವ ಹಂತದಲ್ಲಿ ಕ್ಷೇತ್ರವನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ಸರಿಯಲ್ಲ. ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ವಿದೇಶಿ ಫಂಡಿಂಗ್ ನಡೆದಿರುವ ಬಗ್ಗೆ ಅನುಮಾನವಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬೆಂಬಲವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಾರಥ್ಯದಲ್ಲಿ ಧರ್ಮಸ್ಥಳ ಸತ್ಯಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಧರ್ಮಸ್ಥಳ ಕ್ಷೇತ್ರ, ಸರ್ಕಾರ ಮಾಡದ ಕೆಲಸ ಮಾಡುತ್ತಿದೆ. ಮದ್ಯವರ್ಜನ ಶಿಬಿರ, ಕೆರೆಕಟ್ಟೆಗಳ ಸಂರಕ್ಷಣೆ, ಗ್ರಾಮೀಣ ಭಾಗದ ಜನರಿಗೆ ಉದ್ಯೋಗ, ಅನ್ನದಾಸೋಹ, ಶಿಕ್ಷಣ, ವೈದ್ಯಕೀಯ, ಗ್ರಾಮೀಣಾಭಿವೃದ್ಧಿ, ಸಾವಿರಾರು ದೇವಸ್ಥಾನ ಅಭಿವೃದ್ಧಿ ಕೆಲಸ ಸೇರಿದಂತೆ ನೂರಾರು ಸಮಾಜಮುಖಿ ಕಾರ್ಯ ಮಾಡುತ್ತಿದೆ. ಮಹಿಳಾ ಸಬಲೀಕರಣದಲ್ಲಿ ಧರ್ಮಸ್ಥಳದ ಪಾತ್ರ ಬಹಳ ದೊಡ್ಡದ್ದು. ಅತಿವೃಷ್ಟಿ ಅನಾವೃಷ್ಟಿ ಸಂಭವಿಸಿದಾಗ ಸರ್ಕಾರಕ್ಕೆ 25 ಕೋಟಿ ರೂ. ಸಹಾಯ ಹಸ್ತ ನೀಡಿದ ಧಾರ್ಮಿಕ ಸಂಸ್ಥೆ, ಧರ್ಮಸ್ಥಳ ಮಾತ್ರ. ಅಂತಹ ಸಂಸ್ಥೆ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಒಬ್ಬರೋ, ಇಬ್ಬರೋ ದೂರು ಕೊಟ್ಟ ತಕ್ಷಣ ಎಸ್‌ಐಟಿ ರಚನೆ ಮಾಡಿದ್ದಾರೆ. ಸಾಮೂಹಿಕ ಕೊಲೆ ಆರೋಪದಿಂದ ಧರ್ಮಕ್ಷೇತ್ರಕ್ಕೆ ಕಳಂಕ ಬಂದಿದೆ. ಹಿಂದುಗಳ ಪವಿತ್ರ ಕ್ಷೇತ್ರವಾಗಿರುವ ಧರ್ಮಸ್ಥಳದ ವಿರುದ್ಧ ಕೆಲವು ಕಾಣದ ಕೈಗಳು ಸೇರಿಕೊಂಡು ಇಲ್ಲಸಲ್ಲದ ಆರೋಪ ಮಾಡಿ ಕ್ಷೇತ್ರದ ಹೆಸರು ಕೆಡಿಸುವ ಜತೆಗೆ ಹಿಂದು ಧರ್ಮ ತುಳಿಯುವ ಹುನ್ನಾರ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ತನಿಖೆ ನಡೆಸಿದಾಗ ಚಿನ್ನಯ್ಯ ತೋರಿಸಿದ ಯಾವ ಜಾಗದಲ್ಲೂ ಶವಗಳ ಕಳೇಬರ ದೊರೆತಿಲ್ಲ. ಅಲ್ಲದೆ ಅನನ್ಯ ಭಟ್ ಎಂಬ ಯುವತಿ ಇಲ್ಲದಿರುವ ಕುರಿತು ಸ್ವತಃ ಸುಜಾತಾ ಭಟ್ ಮಾಧ್ಯಮದವರ ಎದುರು ಹೇಳಿಕೊಂಡಿದ್ದಾರೆ. ಆದರೂ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಇನ್ನೂ ಮುಂದಾಗುತ್ತಿಲ್ಲ. ಇದನ್ನು ನೋಡಿದರೆ ಧರ್ಮಸ್ಥಳ ಕ್ಷೇತ್ರ ಮತ್ತು ಹಿಂದು ಧರ್ಮವನ್ನು ಕುಗ್ಗಿಸುವ ಹುನ್ನಾರ ನಡೆದಿದೆ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಆದ್ದರಿಂದ ಧರ್ಮಾಧಿಕಾರಿಗಳು ಮತ್ತು ಅವರ ಕುಟುಂಬಕ್ಕೆ ನೈತಿಕ ಬೆಂಬಲ ಸೂಚಿಸಬೇಕಿದೆ. ಈ ದುಷ್ಕೃತ್ಯದ ಹಿಂದೆ ಇರುವ ಸಂಘಟನೆಗಳು, ದುಷ್ಟ ಶಕ್ತಿಗಳ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮಿಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಪರಮ ದೇವರಾಜೇಗೌಡ, ಮುಖಂಡರಾದ ಪರಮ ಕೃಷ್ಣೇಗೌಡ, ಲಾಯರ್ ಬೋರೇಗೌಡ, ಸಿಂಹಾದ್ರಿ ಮಂಜಣ್ಣ, ಕಲ್ಕೆರೆ ನಾಗಣ್ಣ ವಡ್ಡರಹಳ್ಳಿ ರಾಜಣ್ಣ, ನವಿಲೇ ಪರಮೇಶ್, ಮೆಡಿಕಲ್ ವೆಂಕಟೇಶ್, ಮೀಸೆ ಮಂಜಣ್ಣ, ಹಿರಿಬಿಳ್ತಿ ಯೋಗೇಶ್, ಶಿವರ ಶಿವರಾಜ್, ಭೂದೇಶ್ ಒಳಗೇರಳ್ಳಿ ಮಂಜುನಾಥ್, ರವಿ, ಮಕಾನ್ ಶಿವು, ಸತೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net