ನಾಯಕ ಮುಖಂಡರನ್ನು ರಾಜಕೀಯವಾಗಿ ತುಳಿಯುವ ಪ್ರಯತ್ನ: ಆರೋಪ

Published on

ಮೈಸೂರು: ನಾಯಕ ಸಮುದಾಯದ ಮುಖಂಡರ ಮೇಲೆ ಇಲ್ಲ, ಸಲ್ಲದ ಆರೋಪ ಹೊರಿಸಿ ರಾಜಕೀಯವಾಗಿ ತುಳಿಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಆಧ್ಯಕ್ಷ ದ್ಯಾವಪ್ಪ ನಾಯಕ ದೂರಿದರು.

ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ಪ್ರಬಲ ಸಮುದಾಯವಾಗಿರುವ ನಾಯಕ ಜನಾಂಗ ರಾಜ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಮುಖಂಡರನ್ನು ಬೆಳೆಯಲು ಬಿಡದೆ ಸಂಚಿನ ಮೂಲಕ ಮುಗಿಸುವ ಯತ್ನ ನಡೆದಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಬಿಜೆಪಿ ಸರ್ಕಾರದ ವೇಳೆ ರಮೇಶ್ ಜಾರಕಿಹೊಳಿ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದರು. ಅದೇ ರೀತಿ ಶ್ರೀರಾಮುಲು ಅವರಿಗೂ ಸೂಕ್ತವಾದ ಸ್ಥಾನಮಾನ ಕೊಡದೆ ಅನ್ಯಾಯ ಮಾಡಲಾಗಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಬಳ್ಳಾರಿಯ ನಾಗೇಂದ್ರ ಅವರ ಮೇಲೆ ಆರೋಪ ಹೊರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲಾಯಿತು. ಈಗ ಸಹಕಾರ ಸಚಿವ ಎನ್.ರಾಜಣ್ಣ ವಿರುದ್ಧ ಕುತಂತ್ರ ಮಾಡುತ್ತಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.

ಸಮುದಾಯದ ರಾಜಕೀಯ ಮುಖಂಡರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ರಾಜಕೀಯದಲ್ಲಿ ತುಳಿಯುವ ಪ್ರಯತ್ನ ಮಾಡುವುದು ಮುಂದುವರಿದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.

ಮುಖಂಡರಾದ ಮಯೂರ ಕಲ್ಕುಣಿಕೆ, ಪ್ರಭಾಕರ್ ಹುಣಸೂರು, ಮೂರ್ತಿ, ರಾಜು ಮಾರ್ಕೆಟ್, ಶ್ರೀಧರ್ ಚಾಮುಂಡಿಬೆಟ್ಟ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net