ಗಾಂಧೀಜಿ ಕನಸು ನನಸಾಗಿಸುವ ಪ್ರಯತ್ನ

An attempt to make Gandhiji's dream come true
ಹುನಗುಂದದ ಸಂಗಮೇಶ್ವರ ಸಭಾಭವನದಲ್ಲಿ ಆಯೋಜಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ ಉದ್ಘಾಟಿಸಿದರು. ಯೋಜನಾ ಜಿಲ್ಲಾ ನಿರ್ದೇಶಕ ಚನ್ನಕೇಶವ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಗಮೇಶ ಪಾಟೀಲ ಮತ್ತಿತರರಿದ್ದರು.
Published on

ಹುನಗುಂದ: ಗಾಂಧೀಜಿ ಅವರ ಗ್ರಾಮೀಣ ಭಾರತದ ಕನಸನ್ನು ಎಸ್‌ಕೆಡಿಆರ್‌ಡಿಪಿ ಕಾರ್ಯಗತಗೊಳಿಸುತ್ತಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶಂಕ್ರಪ್ಪ ಹೂಗಾರ ತಿಳಿಸಿದರು.

ಪಟ್ಟಣದ ಸಂಗಮೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಯೋಜನೆಯ ಸೌಲಭ್ಯ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ.ವೀರೇಂದ್ರ ಹೆಗ್ಗಡೆ ಅವರು ಮಹಿಳೆಯರಿಗೆ ಹಾಗೂ ಯುವಕರಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಪ್ರೇರೇಪಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಟ್ರಸ್ಟ್ ಸಿಬ್ಬಂದಿ ಫಲಾನುಭವಿಗಳ ಮನೆಗೆ ತೆರಳಿ ಸಾಲ ಸೌಲಭ್ಯದ ಜತೆಗೆ ಮಾರ್ಗದರ್ಶನ ನೀಡುತ್ತಾರೆ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ಚನ್ನಕೇಶವ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ವಿದ್ಯಾರ್ಥಿ ವೇತನ, ದೇಸಿ ಗೋ ತಳಿಗಳ ಅಭಿವೃದ್ಧಿ, 2.5 ಲಕ್ಷ ರೂ.ವರೆಗೆ ಸಾಲ ಮತ್ತಿತರ ಕಾರ್ಯಗಳನ್ನು ಯೊಜನೆಯ ವತಿಯಿಂದ ಒದಗಿಸಲಾಗುತ್ತಿದೆ ಎಂದರು.

ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ 2 ಸಾವಿರಕ್ಕೂ ಅಧಿಕ ಮದ್ಯವರ್ಜನ ಶಿಬಿರದಿಂದ ಸಾಕಷ್ಟು ಕುಟುಂಬಗಳು ಜೀವನ ಕಟ್ಟಿಕೊಂಡಿವೆ. ಕೆರೆ ಹೂಳೆತ್ತುವ ಕೆಲಸ, ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ನೀಡಿ ಅಭಿವೃದ್ಧಿಪಡಿಸುತ್ತಿರುವುದು ಶ್ಲಾಘನೀಯ ಎಂದರು.

ನಂದಿನಿ ಪಾಟೀಲ ಅನಿಸಿಕೆ ಹಂಚಿಕೊಂಡರು. ನಿರ್ಗತಿಕರ ಮಾಸಾಶನ, ಆರೋಗ್ಯ ರಕ್ಷಾ, ಮರಣ ಸಾಂತ್ವನ, ಕೃಷಿ ಅನುದಾನ ಸೇರಿ ವಿವಿಧ ಸೌಲಭ್ಯ ವಿತರಿಸಲಾಯಿತು.

ಗ್ರೇಡ್-2 ತಹಸೀಲ್ದಾರ್ ಮಹೇಶ ಸಂದಿಗವಾಡ, ಚಿತ್ತವಾಡಗಿ ಪಿಕೆಪಿಎಸ್ ನಿರ್ದೇಶಕ ಮಂಟಪಗೌಡ ನಾಡಗೌಡ, ಪುರಸಭೆ ಸದಸ್ಯೆ ಶಾಂತಾ ಮೇಲಿನಮನಿ, ಒಕ್ಕೂಟದ ಅಧ್ಯಕ್ಷೆ ಗೀತಾ ಕರಡಿ, ರೇಷ್ಮಾ ನದ್ಾ, ಸುಜಾತಾ ತಾರಿವಾಳ, ಮಂಜುಳಾ ಕುರಿ, ಶಿವಮ್ಮ ಜಾಲಿಹಾಳ, ಶ್ರೀದೇವಿ ಮತ್ತಿತರರಿದ್ದರು. ಮೇಲ್ವಿಚಾರಕ ಅರುಣ ಮಠಪತಿ ನಿರೂಪಿಸಿದರು. ತಾಲೂಕು ಯೋಜನಾಧಿಕಾರಿ ಸಂತೋಷ ಸ್ವಾಗತಿಸಿದರು. ಆನಂದ ಪಡಸಲಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net