

ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಸರ್ಕಾರವು ಹನ್ನೊಂದು ವರ್ಷದಿಂದ ದೇಶದ ಸಂಪತ್ತು ಕೊಳ್ಳೆ ಹೊಡೆಯುತ್ತಿದೆ. ತಾನು ನಡೆಸಿದ ಕರ್ಮಕಾಂಡ ಹಾಗೂ ದುರಾಡಳಿತ ಜನರಿಗೆ ತಿಳಿಯಬಾರದೆಂದು ಸ್ಥಳೀಯ ಸಮಸ್ಯೆ ದೊಡ್ಡದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದೆ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಎರಡು ವರ್ಷದಿಂದ ಉತ್ತಮ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಖುರ್ಚಿಗೆ ಕಚ್ಚಾಡುತ್ತಿದ್ದಾರೆ ಎನ್ನುವ ವಿಷಯ ಅವರಿಗೆ ಸಂಬಂಧಿಸಿದ್ದಲ್ಲ. ನಾವು ಏನು ಬೇಕಾದರೂ ಮಾಡುತ್ತೇವೆ. ಆಡಳಿತದಲ್ಲಿ ಎಲ್ಲಿಯಾದರೂ ತಪ್ಪಾಗಿದ್ದರೆ ಪ್ರಶ್ನಿಸಬೇಕು. ಅದು ಬಿಟ್ಟು ವೃಥ ಆರೋಪ ಮಾಡುತ್ತ ಕೂಡುವುದು ಸರಿಯಲ್ಲ ಎಂದು ತಿವಿದರು.
ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆದಾಗ ಅದನ್ನು ತಾನೇ ನಿಲ್ಲಿಸಿದ್ದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ತಾರು ಬಾರಿ ಹೇಳಿಕೆ ನೀಡಿ ಭಾರತಕ್ಕೆ ಅವಮಾನ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು 90 ದೇಶ ಸುತ್ತಾಡಿ ಸ್ನೇಹ ಸಂಪಾದಿಸಿದರೂ 83 ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದರು.
ಗುಜರಾತಿನಲ್ಲಿ ಎರಟು ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಮುಟ್ಟಿನ ದಿನಗಳಲ್ಲಿ ರಜೆ ಮಾಡಿದರೆ ಕೂಲಿ ಸಿಗುವುದಿಲ್ಲ ಎಂದು ಮಹಾರಾಷ್ಟ್ರದಲ್ಲಿ 800ಕ್ಕೂ ಹೆಚ್ಚು ಮಹಿಳೆಯರು ಗರ್ಭಕೋಶ ತಗೆಸಿಕೊಂಡಿದ್ದಾರೆ. ಇದನ್ನು ಚರ್ಚೆಗೆ ತಂದರೆ ಮುಜುಗರವಾಗುತ್ತದೆ ಎಂದು ಬಿಜೆಪಿ ನಾಯಕರು, ನಮ್ಮ ಪಕ್ಷದ ಆಂತರಿಕ ವಿಷಯದ ಕುರಿತು ಹೇಳಿಕೆ ನೀಡುತ್ತಿದ್ದಾರೆ ಎಂದು ಹರಿಹಾಯ್ದರು.
1.14 ಸಾವಿರ ಕೋಟಿ ರೂ. ಮೌಲ್ಯದ ನಕಲಿ ನೋಟು ಹಾಗೂ ವಾಪಸ್ ಪಡೆದ 2,000 ರೂ. ಮುಖಬೆಲೆಯ ನೋಟಗಳು ಈಗಲೂ ಚಲಾವಣೆಯಾಗುತ್ತಿದೆ ಎಂದು ಆರ್‌ಬಿಐ ಹೇಳಿದೆ. ಈ ಕುರಿತು ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಇದನ್ನು ಸಹ ಪ್ರಶ್ನಿಸಬಾರದೆ? ಅವರು ಬೇಕಾದರೆ ಮಹಾತ್ಮ ಗಾಂಧೀಜಿ ಅವರನ್ನು ಬಯ್ಯಬಹುದು. ನಾವು ಮಾತ್ರ ಅವರನ್ನು ಪ್ರಶ್ನಿಸಬಾರದು ಎಂದರೆ ಏನರ್ಥ? ಎಂದು ವ್ಯಂಗ್ಯವಾಡಿದರು. ಭಾರತ ದೇಶವು ಬಿಜೆಪಿ, ಕಾಂಗ್ರೆಸ್‌ಗೆ ಸಂಬಂಧಪಟ್ಟದ್ದಲ್ಲ. ನಮ್ಮ ಪ್ರಧಾನ ಮಂತ್ರಿಗೆ ಪ್ರಶ್ನೆ ಕೇಳುವ ಅಧಿಕಾರ ನಮಗಿದೆ. ನಾನು ಕೇಳುತ್ತೇನೆ ಎಂದರು.