ಕಲ್ಲಿನ ಕ್ವಾರೆಯಿಂದ ಭಯದ ವಾತಾವರಣ

Mbd_stone quarry
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಪಾಲಡ್ಕ ಗ್ರಾಪಂ ವ್ಯಾಪ್ತಿಯ ಪಲ್ಲದಮೇಲು ಪ್ರದೇಶದಲ್ಲಿ ಹಲವು ಮನೆಗಳಿದ್ದು, ಇಲ್ಲಿ ಕಲ್ಲಿನ ಹೊಸ ಕ್ವಾರೆ ಕಾರ್ಯಾಚರಿಸುತ್ತಿದೆ. ಸ್ಥಳೀಯರಿಗೆ ಹೆಚ್ಚಿನ ತೊಂದರೆಯಾಗುತ್ತಿದ್ದು, ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಪಾಲಡ್ಕ ಪಂಚಾಯಿತಿ ಅಧ್ಯಕ್ಷೆ ಅಮಿತಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಕ್ವಾರೆ ಸಹಿತ ಗ್ರಾಮದ ಹಲವು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.

ಗ್ರಾಮಸ್ಥೆ ಸುಶ್ಮಿತಾ ವಿಷಯ ಪ್ರಸ್ತಾಪಿಸಿ, ಪಲ್ಲದಮೇಲು ಪರಿಸರದಲ್ಲಿ ಮನೆಗಳಿಂದ ಕೇವಲ 50 ಮೀ. ಅಂತರದಲ್ಲಿ ಕಲ್ಲಿನ ಕ್ವಾರೆಗಳಿದ್ದು, ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಸ್ಥಳೀಯರಾದ ನಾವು ಇದರಿಂದ ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ನಿವಾಸಿಗಳ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ವೃದ್ಧರು, ಮಕ್ಕಳು ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ. ತಹಸೀಲ್ದಾರ್ ಹಾಗೂ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಗ್ರಾಮಸ್ಥ ಹರಿಶ್ಚಂದ್ರ ಧ್ವನಿಗೂಡಿಸಿದರು.

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ:

ಗಣಿ ಇಲಾಖೆ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿ, ಸದಸ್ಯರ ಸಮಕ್ಷಮದಲ್ಲಿ ಸ್ಥಳ ಪರಿಶೀಲಿಸಿ, ವಾರದೊಳಗೆ ಸಮಸ್ಯೆಗೆ ಪರಿಹಾರ ಕೊಡಿಸುವಲ್ಲಿ ಪ್ರಯತ್ನಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ತಿಳಿಸಿದರು.

ಕಾಮಗಾರಿಯಿಂದ ತೊಂದರೆ:

ಪಾಲಡ್ಕ ಪೂಪಾಡಿಕಲ್ಲು ಪರಿಸರದಲ್ಲಿ ದೊಡ್ಡ ಮಟ್ಟದಲ್ಲಿ ವಿದ್ಯುತ್ ಘಟಕದ ಕಾಮಗಾರಿ ನಡೆಯುತ್ತಿದ್ದು, ಪರಿಸರದವರು ತೊಂದರೆ ಅನುಭವಿಸುವಂತಾಗಿದೆ. ಸಾಧಕ- ಬಾಧಕ ಪರಿಗಣಿಸದೆ ಯಾವ ಮಾನದಂಡದಲ್ಲಿ ಘಟಕಕ್ಕೆ ಪರವಾನಗಿ ನೀಡಲಾಗಿದೆ ಎಂದು ಗ್ರಾಮಸ್ಥೆ ಗೀತಾ ಪ್ರಶ್ನಿಸಿದರು. ಪಿಡಿಒ ರಕ್ಷಿತಾ ಉತ್ತರಿಸಿ, ಕೆಪಿಟಿಸಿಎಲ್ ಮೂಲಕ ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, ಪಂಚಾಯಿತಿ ಪರವಾನಗಿ ಬೇಕಾಗಿಲ್ಲ. ಘಟಕದಿಂದ ತೊಂದರೆಯಾಗುತ್ತಿದ್ದಲ್ಲಿ ಲಿಖಿತ ರೂಪದಲ್ಲಿ ದೂರು ನೀಡಿದಲ್ಲಿ, ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.

ಸೈಬರ್ ಕ್ರೈಂಗೆ ಸಂಬಂಧಪಟ್ಟಂತೆ ಸ್ಥಳೀಯ ಠಾಣೆಗಳಲ್ಲಿ ಯಾವ ರೀತಿಯ ವ್ಯವಸ್ಥೆ ಇದೆ? ಎಂದು ಗ್ರಾಮಸ್ಥ ಜಗದೀಶ್ ಪೂಜಾರಿ ಪ್ರಶ್ನಿಸಿದರು. ಸ್ಥಳೀಯ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸಿ, ಸೂಕ್ತ ಕ್ರಮಕ್ಕೆ ಪ್ರಯತ್ನಿಸಲಾಗುತ್ತದೆ ಎಂದು ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕ ನವೀನ್ ಹೇಳಿದರು.

ತಾಲೂಕು ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಬಿ. ನೋಡಲ್ ಅಧಿಕಾರಿಯಾಗಿದ್ದರು. ಮಂಗಳೂರು ಪೊಲೀಸ್ ಸಿಬ್ಬಂದಿ ಸುರೇಶ್, ಉಪಾಧ್ಯಕ್ಷ ಪ್ರವೀಣ್ ಸಿಕ್ವೇರಾ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಅರ್ಹರಿಗೆ ಹಕ್ಕುಪತ್ರ

ಪೂಪಾಡಿಕಲ್ಲಿನಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಕ್ಕೆ ಪಂಚಾಯಿತಿಯಿಂದ ಅನುದಾನ ಒದಗಿಸುವಂತೆ ವಾರ್ಡನ್ ವಿನಂತಿಸಿದರು. ಹಾಸ್ಟೆಲ್ ದುರಸ್ತಿಗೆ ಬೇಕಾದ ವಿಚಾರಗಳ ಕುರಿತು ನಿರ್ಣಯ ಮಾಡಿ ಎಂದು ಸುಚರಿತ ಶೆಟ್ಟಿ ಪಂಚಾಯಿತಿಗೆ ಸಲಹೆ ನೀಡಿದರು. ಪೂಪಾಡಿಕಲ್ಲು ಹಾಗೂ ಜನತಾ ನಗರ ಅನರ್ಹರ ಹಕ್ಕುಪತ್ರಗಳನ್ನು ರದ್ದುಗೊಳಿಸಿ, ಅರ್ಹರಿಗೆ ಹಂಚುವಂತೆ ನಿವೃತ್ತ ಶಿಕ್ಷಕ ಟಿ.ಎನ್.ಕೆಂಬಾರೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net