ಫಿನಿಕ್ಸ್‌ನಂತೆ ಎದ್ದುನಿಂತ ಕ್ರೀಡಾಪಟು

1691577345897
Published on

ಅವಿನಾಶ್ ಜೈನಹಳ್ಳಿ ಮೈಸೂರು
ಜೀವನದಲ್ಲಿ ಎಂತಹ ಕಷ್ಟ ಬಂದರೂ ಹಠ ಮತ್ತು ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಪ್ಯಾರಾ ಅಥ್ಲೀಟ್ ಬಿ.ಅನಂತರಾವ್ ನಿದರ್ಶನವಾಗಿದ್ದಾರೆ.


ತನ್ನ ನೆಚ್ಚಿನ (ಜಿಮ್ನಾಸ್ಟಿಕ್) ಕ್ರೀಡೆಯಿಂದಲೇ ದೈಹಿಕ ಬಲ ಕಳೆದುಕೊಂಡು ಸ್ನೇಹಿತರು, ಹಿತೈಷಿಗಳು ನೀಡಿದ ಹಣದಿಂದಲೇ ಜೀವನ ಸಾಗಿಸುವ ಚಿಂತಾಜನಕ ಪರಿಸ್ಥಿತಿಗೆ ತಲುಪಿದ್ದ ಅನಂತರಾವ್ ಅವರೀಗ ಫಿನಿಕ್ಸ್ ಹಕ್ಕಿಯಂತೆ ಎದ್ದು ನಿಂತಿದ್ದಾರೆ. ಜಿಮ್ನಾಸ್ಟಿಕ್ ಕ್ಷೇತ್ರದಲ್ಲಿ ಕರ್ನಾಟಕದ ಕೀರ್ತಿಯನ್ನು ರಾಷ್ಟ್ರ ಮಟ್ಟದಲ್ಲಿ ಎತ್ತಿ ಹಿಡಿದಿದ್ದ ಅನಂತರಾವ್ ಇದೀಗ ಪ್ಯಾರಾ ಅಥ್ಲೀಟ್ ಆಗಿ ಬದಲಾಗಿದ್ದಾರೆ. ಕ್ರೀಡಾ ಕ್ಷೇತ್ರದಲ್ಲೇ ಸಾಧನೆ ಮಾಡಬೇಕು ಎಂಬ ಹಠಕ್ಕೆ ಬಿದ್ದು, ಸತತ ಶ್ರಮ ವಹಿಸಿ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಚೀನಾದಲ್ಲಿ ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಿರುವ ಪ್ಯಾರಾ ಏಷ್ಯನ್ ಗೇಮ್ಸ್‌ನ ಎಫ್ 51-ಡಿಸ್ಕಸ್ ಥ್ರೋ ಸ್ಪರ್ಧಿಯಾಗಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಪ್ಯಾರಾ ಏಷ್ಯನ್ ಗೇಮ್ಸ್‌ನ ಆಯ್ಕೆ ನಡೆದಿತ್ತು.
ಪ್ಯಾರಾ ಅಥ್ಲೀಟ್ ಕೋಚ್ ಸತ್ಯನಾರಾಯಣ ಅವರ ಮಾರ್ಗದರ್ಶನ ಹಾಗೂ ನೆರವಿನೊಂದಿಗೆ ಶ್ರಮಪಟ್ಟು ಡಿಸ್ಕಸ್ ಥ್ರೋ ಹಾಗೂ ಕ್ಲಬ್ ಥ್ರೋ ಅಭ್ಯಾಸ ಮಾಡುತ್ತಿದ್ದಾರೆ. ಪ್ಯಾರಾ ಏಷ್ಯನ್ ಗೇಮ್ಸ್, ಪ್ಯಾರಾ ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಪದಕ ತರಲೇಬೇಕು ಎಂಬ ಹಠ ತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಕಠಿಣ ಶ್ರಮ ವಹಿಸಿದ್ದಾರೆ.

2010ನೇ ಸಾಲಿನ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಜಿಮ್ನಾಸ್ಟಿಕ್‌ನ ‘ಫ್ಲೋರ್ ಎಕ್ಸೈಜ್’ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇಳೆ ನಡೆದ ಅಚಾತುರ್ಯದಿಂದ ಸ್ಪೈನಲ್ ಕಾರ್ಡ್‌ಗೆ ಪೆಟ್ಟು ಬಿತ್ತು. ಪರಿಣಾಮ, ಇಡೀ ದೇಹ ಸ್ವಾಧೀನ ಕಳೆದುಕೊಂಡಿತು. ಅಂದಿನಿಂದ ಹಾಸಿಗೆ ಹಿಡಿದಿದ್ದರು. ಬಳಿಕ 2018ರಿಂದ ಪ್ಯಾರಾ ಅಥ್ಲೀಟ್ ಆದ ಅವರು ಡಿಸ್ಕಸ್ ಥ್ರೋ ಹಾಗೂ ಕ್ಲಬ್ ಥ್ರೋ ಅಭ್ಯಾಸ ಪ್ರಾರಂಭಿಸಿದರು.

ಮೂಲತಃ ಮೈಸೂರಿನವರಾದ ಬಿ.ಅನಂತರಾವ್ ಡಿಸ್ಕಸ್ ಥ್ರೋ ಹಾಗೂ ಕ್ಲಬ್ ಥ್ರೋ ಅಭ್ಯಾಸ ಮಾಡುವ ಉದ್ದೇಶದಿಂದಲೇ 2020ರಿಂದ ಬೆಂಗಳೂರಿನಲ್ಲಿ ಇದ್ದಾರೆ. ಕೋಚ್ ಸತ್ಯನಾರಾಯಣ ಇನ್ನಿತರರು ಅವರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ. ಒಂದು ದಿನ ಥ್ರೋ ಅಭ್ಯಾಸ, ಮತ್ತೊಂದು ದಿನ ಫಿಟ್‌ನೆಸ್ ಅಭ್ಯಾಸ ಮಾಡುತ್ತಿದ್ದಾರೆ. ಇವರ ಅಭ್ಯಾಸ ಬೆಳಗ್ಗೆ 7 ರಿಂದ 9 ಹಾಗೂ ಸಂಜೆ 5 ರಿಂದ 7 ಗಂಟೆ ನಡುವೆ ನಡೆಯುತ್ತಿದೆ. ಶೀಘ್ರದಲ್ಲೇ ಬೆಂಗಳೂರಿನ ಸಾಯಿ ಕೋಚಿಂಗ್ ಕ್ಯಾಂಪ್‌ನಲ್ಲಿ ಭಾಗವಹಿಸಲಿದ್ದಾರೆ.

ಮೂರು ರಾಷ್ಟ್ರೀಯ ಪದಕ

ಈಗಾಗಲೇ ಮೂರು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿರುವ ಅನಂತರಾವ್, ಒಂದು ಚಿನ್ನ ಸೇರಿದಂತೆ ಮೂರು ರಾಷ್ಟ್ರೀಯ ಪದಕಗಳನ್ನು ಪಡೆದು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಕಳೆದ ಮಾರ್ಚ್‌ನಲ್ಲಿ ಪೂನಾದಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ಯಾರಾ ಎಫ್ 51-ಡಿಸ್ಕಸ್ ಥ್ರೋನಲ್ಲಿ ಚಿನ್ನ ಹಾಗೂ ಕ್ಲಬ್ ಥ್ರೋನಲ್ಲಿ ಕಂಚಿನ ಪದಕ ಪಡೆದಿದ್ದಾರೆ. 2021ರಲ್ಲಿ ಬೆಂಗಳೂರಿನಲ್ಲಿ ಹಾಗೂ 2022ರಲ್ಲಿ ಒಡಿಶಾದಲ್ಲಿ ನಡೆದ ರಾಷ್ಟ್ರೀಯ ಕ್ಲಬ್ ಥ್ರೋನಲ್ಲಿ ಕಂಚಿನ ಪದಕ ಪಡೆದು ಗಮನ ಸೆಳೆದಿದ್ದಾರೆ.

ಜಿಮ್ನಾಸ್ಟಿಕ್ ಸಾಧನೆಯೂ ಅಪಾರ!

ನಾಲ್ಕನೇ ತರಗತಿಯಿಂದಲೇ ಕ್ರೀಡಾ ಅಭಿಯಾನ ಆರಂಭಿಸಿದ ಅನಂತರಾವ್, ಜಿಮ್ನಾಸ್ಟಿಕ್‌ನಲ್ಲಿ ಮೈಸೂರಿನಿಂದ ರಾಷ್ಟ್ರ ಮಟ್ಟದವರೆಗೂ ಛಾಪು ಮೂಡಿಸಿದ್ದ ಸಾಧನೆ ಕಡಿಮೆಯೇನಲ್ಲ. ತನ್ನ 11ನೇ ವರ್ಷದಲ್ಲಿ 2000ನೇ ಸಾಲಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ರಾಜ್ಯ ಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಇವರ ಪದಕ ಬೇಟೆ ಆರಂಭವಾಯಿತು. ದಸರಾ ಕ್ರೀಡಾಕೂಟದ ಸಬ್‌ಜೂನಿಯರ್ ವಿಭಾಗದಲ್ಲಿ 1 ಬೆಳ್ಳಿ ಮತ್ತು ಕಂಚು, 2001ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ತಲಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ, 2002ರಲ್ಲಿ ಚಿನ್ನ ಗೆದ್ದು ತನ್ನ ಸಾಮರ್ಥ್ಯ ಒರೆಗೆ ಹಚ್ಚಿದ್ದರು. ಹೀಗೆ ಜಿಲ್ಲಾ, ವಿಭಾಗೀಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸಬ್‌ಜೂನಿಯರ್, ಜೂನಿಯರ್, ಸೀನಿಯರ್, ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ 50 ಚಿನ್ನ, 40 ಬೆಳ್ಳಿ, 35 ಕಂಚು ಸೇರಿದಂತೆ ಒಟ್ಟು 125ಕ್ಕೂ ಹೆಚ್ಚು ಪದಕಗಳನ್ನು ಪಡೆದಿದ್ದಾರೆ. ಮುಂದೊಂದು ದಿನ ಅಂತಾರಾಷ್ಟ್ರೀಯ ಮಟ್ಟದ ಜಿಮ್ನಾಸ್ಟಿಕ್‌ನಲ್ಲಿ ಭಾರತಕ್ಕೆ ಹೆಚ್ಚು ಪದಕ ತರಬೇಕು ಎಂಬ ಮಹದಾಸೆ ಹೊಂದಿದ್ದ ಅನಂತರಾವ್‌ಗೆ 2010ರಲ್ಲಿ ಕರಾಳ ಅಧ್ಯಾಯ ಮುನ್ನುಡಿ ಬರೆದಿತ್ತು.

‘ವಿಜಯವಾಣಿ’ ವರದಿ ಮಾಡಿತ್ತು!

2010ನೇ ಸಾಲಿನ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಜಿಮ್ನಾಸ್ಟಿಕ್‌ನ ‘ಫ್ಲೋರ್ ಎಕ್ಸೈಜ್’ ವಿಭಾಗದಲ್ಲಿ ಸ್ಪರ್ಧಿಸಿದ್ದ ವೇಳೆ ನಡೆದ ಅಚಾತುರ್ಯದಿಂದ ಸ್ಪೈನಲ್ ಕಾರ್ಡ್‌ಗೆ ಪೆಟ್ಟು ಬಿತ್ತು. ಪರಿಣಾಮ, ಇಡೀ ದೇಹ ಸ್ವಾಧೀನ ಕಳೆದುಕೊಂಡಿತು. ಗಾಯಗೊಂಡಿದ್ದ ಅವರನ್ನು ದಸರಾ ಕ್ರೀಡಾ ಉಪ ಸಮಿತಿಯ ಸದಸ್ಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಕೆಲದಿನ ಚಿಕಿತ್ಸೆ ಕೊಡಿಸಿ ಕೈತೊಳೆದುಕೊಂಡರು.

ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ತಂದೆ ಬಾಬುರಾವ್(ಆಟೋ ಚಾಲಕ) ನಿಧನರಾದರು. ತಾಯಿ ಲಕ್ಷ್ಮಿಬಾಯಿ ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದರು. ಸ್ವಂತ ಮನೆ ಇರಲಿಲ್ಲ. ದುಡಿದು ಸಾಕುವವರೂ ಇರದೆ ಅನಂತರಾವ್ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸಿತ್ತು. ಈ ಸಂಬಂಧ ‘ವಿಜಯವಾಣಿ’ 2014 ಜೂನ್ 4ರ ಸಂಚಿಕೆಯಲ್ಲಿ ‘ಕ್ರೀಡಾ ಸಾಧನೆ ಕನಸಿಗೆ ಕೊಳ್ಳಿಯಿಟ್ಟ ಕ್ರೀಡೆ!’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿದ್ದರಿಂದ ಅನಂತರಾವ್‌ಗೆ ಅನೇಕರು ಸಹಾಯ ಹಸ್ತ ಚಾಚಿದ್ದರು.

ಜಿಮ್ನಾಸ್ಟಿಕ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸುವ ಅಗಾಧ ಕನಸು ಕಟ್ಟಿಕೊಂಡು ಹಗಲಿರುಳೆನ್ನದೆ ಅಭ್ಯಾಸ ಮಾಡಿದ್ದೆ. ಆದರೆ ವಿಧಿ ನಿಯಮವೇ ಬೇರೆಯಿತ್ತು. ಈಗ ಪ್ಯಾರಾ ಏಷ್ಯನ್ ಗೇಮ್ಸ್, ಪ್ಯಾರಾ ಒಲಿಂಪಿಕ್ಸ್‌ಗಳಲ್ಲಿ ಪದಕ ಪಡೆದು ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದೇ ತರುತ್ತೇನೆ.ಬಿ.ಅನಂತರಾವ್ ಪ್ಯಾರಾ ಅಥ್ಲೀಟ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net