ಅರೆಸ್ಟ್ ಮಾಡೋಕೆ ಬಂದ ಪೊಲೀಸರ ಮೇಲೆರಗಿದ ಹಂತಕರು ಕೊನೆಗೂ ಸೆರೆ ಸಿಕ್ರು...

11Rural1
Published on

ದೊಡ್ಡಬಳ್ಳಾಪುರ ಗ್ರಾಮಾಂತರ: ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದವರ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾದ ಆರೋಪಿಗಳಿಗೆ ದೊಡ್ಡಬೆಳವಂಗಲ ಪೊಲೀಸರು ಗುಂಡು ಹಾರಿಸಿದ್ದಾರೆ.

ಆಗಸ್ಟ್ 16ರ ರಾತ್ರಿ ತಾಲೂಕಿನ ಹುಲಿಕುಂಟೆಯಲ್ಲಿ ನೀರು ಕೇಳುವ ನೆಪದಲ್ಲಿ ನುಗ್ಗಿದ್ದ ಹಂತಕರು, ಮಾರಕಾಸಗಳಿಂದ ಕೊಚ್ಚಿ ಮಂಜುನಾಥ್ (22) ಎಂಬ ಯುವಕನ ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಸಂಜೆ ಆರೋಪಿಗಳ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಹಲ್ಲೆ ಮಾಡಲು ಯತ್ನಿಸಿದ್ದು, ಆರೋಪಿಗಳಾದ ಹೇಮಂತ್, ಸೋನು ಎಂಬುವವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಪ್ರಕರಣದಲ್ಲಿ ಈ ಮೊದಲೇ ಬಂಧಿಯಾಗಿದ್ದ ಆರೋಪಿ ಯಾಸಿರ್ ನೀಡಿದ ಸುಳಿವಿನ ಮೇಲೆ ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ರಾಘವ ಎಸ್.ಗೌಡ ಹಾಗೂ ದೊಡ್ಡಬೆಳವಂಗಲ ಸಬ್‌ಇನ್‌ಸ್ಪೆಕ್ಟರ್ ಮಂಜೇಗೌಡ ನೇತೃತ್ವದ ಪೊಲೀಸರ ತಂಡ ಚುಂಚೇಗೌಡನ ಹೊಸಹಳ್ಳಿ ಬಳಿ ಆರೋಪಿಗಳನ್ನು ಬಂಧಿಸಲು ತೆರಳಿತ್ತು. ಈ ವೇಳೆ ರಾಜಾನುಕುಂಟೆ ಸಬ್‌ಇನ್‌ಸ್ಪೆಕ್ಟರ್ ಶಂಕರಪ್ಪ ಮತ್ತು ದೊಡ್ಡಬೆಳವಂಗಲ ಠಾಣೆ ಪೇದೆ ಹುಸೇನ್ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು ಎನ್ನಲಾಗಿದೆ. ಗಾಯಗೊಂಡ ಆರೋಪಿಗಳನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ತಡ ರಾತ್ರಿಯೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಕೆ.ಲಕ್ಷ್ಮೀಗಣೇಶ್ ಹಾಗೂ ಡಿವೈಎಸ್ಪಿ ರಂಗಪ್ಪ ಭೇಟಿ ನೀಡಿದರು. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ಭೇಟಿ ನೀಡಿ ಘಟನೆಗೆ ಬಳಸಿದ ವಸ್ತುಗಳು ಮತ್ತು ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net