

ಮಂಡ್ಯ: ಪಾಂಡವಪುರ ಪಟ್ಟಣದಲ್ಲಿ ಹಸಿವು ನೀಗಿಸಿಕೊಳ್ಳಲು ಭಿಕ್ಷೆ ಕೇಳಿದ ಮಾನಸಿಕ ಅಸ್ವಸ್ಥನಿಗೆ ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಡೆದಿದೆ.
ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿರುವ ಮೆಡಿಕಲ್ ಸ್ಟೋರ್‌ನಲ್ಲಿ ಮಾನಸಿಕ ಅಸ್ವಸ್ಥ ಭಿಕ್ಷೆ ನೀಡುವಂತೆ ಬೇಡಿಕೊಂಡಿದ್ದಾನೆ. ಇದಕ್ಕೆ ನಿರಾಕರಿಸಿದ ಮಾಲೀಕರು ಮುಂದೆ ಹೋಗುವಂತೆ ಸೂಚಿಸಿದರು. ಆದರೂ ಅಸ್ವಸ್ಥ ವ್ಯಕ್ತಿ ಮುಂದೆ ಹೋಗದೆ ಹಲವು ಬಾರಿ ಭಿಕ್ಷೆ ನೀಡುವಂತೆ ಒತ್ತಾಯಿಸಿ ಬೇಡಿಕೊಂಡಿದ್ದಾನೆ. ಇದರಿಂದ ಕುಪಿತಗೊಂಡ ಮಾಲೀಕರು ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ವ್ಯಕ್ತಿಯ ತಲೆಗೆ ತೀವ್ರ ಪೆಟ್ಟು ರಕ್ತ ಸುರಿಯುತ್ತಿದ್ದನ್ನು ಕಂಡು ಸಾರ್ವಜನಿಕರು ಅಂಗಡಿ ಮಾಲೀಕರು ತೀವ್ರ ತರಾಟೆಗೆ ತೆಗೆದುಕೊಂಡರು. ಜತೆಗೆ ಗಾಯಗೊಂಡ ವ್ಯಕ್ತಿಯನ್ನು ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದರು. ವೈದ್ಯರು ತಲೆಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ.