

ಶ್ರೀರಂಗಪಟ್ಟಣ: ನಾಡಹಬ್ಬ ಶ್ರೀರಂಗಪಟ್ಟಣ ದಸರೆಯ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಆರೋಪಿಸಿ ಜಾನಪದ ಕಲಾವಿದ ಕಾರಸವಾಡಿ ಮಹದೇವು ಜಿಲ್ಲಾಡಳಿತದ ವಿರುದ್ಧ ಸಾವಿರಾರು ಜನರ ಸಮ್ಮುಖದಲ್ಲೇ ಆಕ್ರೋಶ ಹೊರಹಾಕಿದರು.
ಪಟ್ಟಣದ ಶ್ರೀರಂಗನಾಥಸ್ವಾಮಿ ಮೈದಾನದಲ್ಲಿನ ಶ್ರೀರಂಗ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಗೆ ಮಂಗಳವಾರ ಸಂಜೆ 5.20 ರಿಂದ 5.40ರವರೆಗೆ ಜಾನಪದ ಜೇಂಕಾರ ಕಾರ್ಯಕ್ರಮ ನಡೆಸಿಕೊಡಲು 20 ನಿಮಿಷಗಳ ಕಾಲವಾಕಾಶ ನೀಡಲಾಗಿತ್ತು. ಆದರೆ ಕಾರ್ಯಕ್ರಮಗಳ ಆಯೋಜನೆಯಿಂದ ಒಂದೂವರೆ ತಾಸು ತಡವಾಗಿ ಜಾನಪದ ಗೀತೆಗಳ ಪ್ರಸ್ತುತಪಡಿಸಲು ಅವಕಾಶ ನೀಡಿ ಕಲಾವಿದರು ಹಾಡುಗಾರಿಕೆಗೆ ಪ್ರಾರಂಭಿಸುವ ಮುಂಚೆಯೇ ಸಂಗೀತ ರಸಸಂಜೆ ಕಾರ್ಯಕ್ರಮ ತಡವಾಗಲಿದೆ ಎಂಬ ಅಧಿಕಾರಿಗಳ ನಿರ್ದೇಶನದ ಮೇರೆಗೆ ವೇದಿಕೆ ಕಾರ್ಯಕ್ರಮಗಳ ಆಯೋಜಕರು ಜಾನಪದ ಹಾಡುಗಳಿಗೆ ಬ್ರೇಕ್ ಹಾಕಿ ಕಲಾವಿದರ ಮುಂದಿದ್ದ ಮೈಕ್ ತೆರವುಗೊಳಿಸಿದರು.
ಇದರಿಂದ ಸ್ಥಳೀಯ ದೇಸಿ ಕಲಾವಿದರು ಮುಜುಗರಕ್ಕೆ ಒಳಗಾಗಿದ್ದು, ಕಲಾವಿದ ಕಾರಸವಾಡಿ ಮಹದೇವು ಮತ್ತೆ ಮೈಕಿನಲ್ಲೇ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಎನ್.ಯತೀಶ್ ಸೇರಿದಂತೆ ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಅವರ ಹೆಸರು ಹೇಳಿ ಯಾವ ಉದ್ದೇಶದಿಂದ ನಮಗೆ ನೀವೇ ಕಾರ್ಯಕ್ರಮ ನೀಡುವಂತೆ ಆಹ್ವಾನ ನೀಡಿ ಸಹಸ್ರಾರು ಜನರ ಮುಂದೆ ಅವಮಾನಿಸಿದ್ದೀರಿ. ಈ ನಡೆ ನಿಮಗೆ ಶೋಭೆ ತರುವುದಿಲ್ಲ. ಲಕ್ಷ ಲಕ್ಷ ರೂ. ನೀಡಿ ಕರೆತಂದ ಪಾಶ್ಚಾತ್ಯ ಸಂಗೀತ ರಸಸಂಜೆ ತಂಡದವರ ಮುಂದೆ ಸರಳ ದಸರಾ ಹೆಸರಿನಲ್ಲಿ ದೇಸಿ ಜಾನಪದ ಕಲಾವಿದರನ್ನು ಕರೆಸಿ ಕಡೆಗಣಿಸಿರುವುದು ನಿಮ್ಮ ಅಂಧ ದರ್ಬಾರ್‌ಗೆ ಸಾಕ್ಷಿ ಎಂದು ನೋವಿನಿಂದ ನುಡಿದು ವೇದಿಕೆಯಿಂದ ಕೆಳಗಿಳಿದರು. ಈ ವೇಳೆ ವೇದಿಕೆ ಕೆಳಭಾಗದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಸಿಗದೆ ಕಾದು ಕುಳಿತಿದ್ದ ಇತರ ಜಾನಪದ ಕಲಾವಿದರೂ ಸಹಮತ ಸೂಚಿಸಿ ಹೊರನಡೆಯಲು ಮುಂದಾದರು.
ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತವರಣ ನಿರ್ಮಾಣವಾಗಿ, ತಕ್ಷಣ ಅಧಿಕಾರಿಗಳು ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ ಕಲಾವಿದರ ಬಳಿ ದೌಡಾಯಿಸಿ ಮನವೊಲಿಸಲು ಯತ್ನಿಸಿದರು. 4 ಜಾನಪದ ಹಾಡುಗಳ ಬದಲಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತ 1 ಹಾಡನ್ನು ಮಾತ್ರ ಹಾಡಲು ಕಾರ್ಯಕ್ರಮ ಸೀಮಿತಗೊಳಿಸಲಾಯಿತು.