ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೋರಿ ಸಂಸದರಿಗೆ ಮನವಿ

human raight
Published on

ಮಡಿಕೇರಿ: ಕೊಡಗು ಜಿಲ್ಲೆಯನ್ನು ಕಾಡುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಕೇಂದ್ರ ಸರಕಾರದ ಮೂಲಕ ಶಾಶ್ವತ ಪರಿಹಾರ ಕೋರಿ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಒಕ್ಕೂಟದ ರಾಜ್ಯ ಸಮಿತಿ ಮೈಸೂರು-ಕೊಡಗು ಕ್ಷೇತ್ರದ ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಅವರಿಗೆ ಮನವಿ ಸಲ್ಲಿಸಿದೆ.

ಸಂಸದರ ಕಚೇರಿಯ ಸಿಬ್ಬಂದಿ ಬೊಳ್ಳಜಿರ ಬಿ.ಅಯ್ಯಪ್ಪ ಅವರ ಮೂಲಕ ಸಂಸದ ಯದುವೀರ್ ಅವರಿಗೆ ಮಾನವ ಹಕ್ಕುಗಳ ಅಂತರಾಷ್ಟ್ರೀಯ ಒಕ್ಕೂಟದ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಮನವಿ ಸಲ್ಲಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷದಿಂದ ಅನೇಕ ಜೀವಗಳು ಬಲಿಯಾಗುತ್ತಿದ್ದು, ಕೃಷಿ ಫಸಲು ನಾಶವಾಗುತ್ತಿದೆ. ತಕ್ಷಣ ಕೇಂದ್ರ ಸರ್ಕಾರದ ಮೂಲಕ ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸಬೇಕು. ಕೃಷಿ ಫಸಲು ನಷ್ಟಕ್ಕೆ ಕೇಂದ್ರದಿಂದಲೂ ಪರಿಹಾರ ನೀಡಬೇಕು. ಹುಲಿ, ಚಿರತೆ, ಕಾಡೆಮ್ಮೆ, ಕಾಡುಹಂದಿ, ಮಂಗಗಳು ಸೇರಿದಂತೆ ವನ್ಯಜೀವಿಗಳ ಉಪಟಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಆಹಾರ ಮತ್ತು ನೀರು ಕೊರತೆಯಾಗದಂತೆ ನೋಡಿಕೊಳ್ಳಲು ಯೋಜನೆ ಜಾರಿಗೆ ತರಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದರು.

ಕಾವೇರಿಯ ಉಗಮ ಸ್ಥಾನ ತಲಕಾವೇರಿಗೆ ತೆರಳುವ ಭಾಗಮಂಡಲ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಭಕ್ತರ ಪ್ರಯಾಣ ಕಷ್ಟಕರವಾಗಿದೆ. ಇದು ಹೆದ್ದಾರಿಯಾಗಿದ್ದು, ತಕ್ಷಣ ರಸ್ತೆ ವಿಸ್ತರಣೆ ಮತ್ತು ರಸ್ತೆಯ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಬೇಕು. ಕೊಡಗು ಜಿಲ್ಲೆಯ ಬಹುತೇಕ ಯುವ ಸಮೂಹ ಪ್ರವಾಸೋದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಇಲ್ಲದೆ ಇರುವುದರಿಂದ ಪ್ರವಾಸೋದ್ಯಮದ ಮೂಲಕವೇ ಉದ್ಯೋಗ ಸೃಷ್ಟಿಯಾಗಬೇಕಿದೆ. ಆದ್ದರಿಂದ ಪ್ರವಾಸೋದ್ಯಮದ ಅಭಿವೃದ್ಧಿಗೆ ಕೇಂದ್ರ ಸರಕಾರದಿಂದ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದರು.

ಕೊಡಗು ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇನ್ನೂ ಕೂಡ ಸ್ಥಾಪನೆಯಾಗಿಲ್ಲ. ಇದರಿಂದ ಕಸ ಸಂಗ್ರಹ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೇಂದ್ರದ ಅನುದಾನದಲ್ಲಿ ಸುಸಜ್ಜಿತ ಮತ್ತು ವೈಜ್ಞಾನಿಕ ರೂಪದ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಬೀಡಾಡಿ ಹಸುಗಳು ಕಟುಕರ ಪಾಲಾಗುತ್ತಿರುವುದರಿಂದ ಅನಾಥ ಹಸುಗಳ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರದ ಮೂಲಕ ವಿಶೇಷ ಯೋಜನೆ ಜಾರಿಗೆ ತರಬೇಕು ಮತ್ತು ಗೋಸಂರಕ್ಷಣಾ ಕೇಂದ್ರ ಸ್ಥಾಪಿಸಿ ಅನುದಾನ ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಎಸ್.ರವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net