

ಮದ್ದೂರು: ಮರಣದ ನಂತರ ಮಣ್ಣಲ್ಲಿ ಮಣ್ಣಾಗುವ ಕಣ್ಣು, ಇಬ್ಬರು ಅಂಧರ ಬಾಳಿಗೆ ಬೆಳಕಾಗುವುದು. ಆದ್ದರಿಂದ ಮರಣದ ನಂತರ ಪ್ರತಿಯೊಬ್ಬರೂ ಕಣ್ಣುಗಳನ್ನು ದಾನ ಮಾಡಬೇಕು ಎಂದು ಮುಖಂಡ ಬಿ.ಕೃಷ್ಣ ತಿಳಿಸಿದರು.
ತಾಲೂಕಿನ ಕೊಪ್ಪ ಹೋಬಳಿಯ ನಂಬಿನಾಯಕನಹಳ್ಳಿ ಗ್ರಾಮದಲ್ಲಿ ಹನುಂಂತರಾಯಸ್ವಾಮಿ ಸೇವಾ ಟ್ರಸ್ಟ್, ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ರೋಟರಿ, ನಂಬಿನಾಯಕನಹಳ್ಳಿ ಗ್ರಾಮಸ್ಥರ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವೈದ್ಯಕೀಯ ಆರೋಗ್ಯ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಣ್ಣು ದೇಹದ ಪ್ರಮುಖ ಅಂಗವಾಗಿದ್ದು, ಕಣ್ಣುಗಳ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು. ಪ್ರಸ್ತುತ ಒತ್ತಡ ಜೀವನದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟಕರವಾದ ಕೆಲಸವಾಗಿದೆ. ಅರೋಗ್ಯ ರಕ್ಷಣೆಯ ಕಡೆಗೂ ಗಮನ ನೀಡಬೇಕು. ಎಂದು ಮನವಿ ಮಾಡಿದರು.
ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಧುಮೇಹ, ಬಿಪಿ, ಕಣ್ಣಿನ ತಪಾಸಣೆ, ಅವಶ್ಯಕತೆ ಉಳ್ಳವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ವಿತರಣೆ ಮಾಡಲಾಯಿತು. ಜತೆಗೆ ಹೃದಯರೋಗ ತಪಾಸಣೆ, ಇಸಿಜಿ, ಮೂಳೆ ರೋಗ, ಕಿವಿ, ಗಂಟಲು, ಮೂಗು ಮತ್ತು ಚರ್ಮರೋಗ ತಪಾಸಣೆ, ಮಹಿಳೆಯರಿಗೆ ಸ್ತನ ಕ್ಯಾನ್ಸರ್, ಗರ್ಭಕೋಶದ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ, ಪೈಲ್ಸ್, ಹರ್ನಿಯಾ, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲು ಸೇರಿದಂತೆ ವಿವಿಧ ರೋಗಗಳನ್ನು ತಪಾಸಣೆ ಮಾಡಲಾಯಿತು. ಸುತ್ತಮುತ್ತಲ ನೂರಾರು ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು.
ಮುಖಂಡರಾದ ಸಂಜಯ, ನಂಜೇಗೌಡ, ಡಾ.ಶ್ಯಾಸುಂದರ್, ಹನುಮಂತರಾಯಸ್ವಾಮಿ ಸೇವಾ ಟ್ರಸ್ಟ್‌ನ ಟ್ರಸ್ಟಿಗಳು ಹಾಗೂ ನಂಜನಾಯಕನಹಳ್ಳಿ ಗ್ರಾಮದ ಮುಖಂಡರು ಇದ್ದರು.