ಬಲಿಗಾಗಿ ಬಾಯ್ದೆರೆದಿದೆ ಐತಿಹಾಸಿಕ ಹಿರೇಬಾವಿ

06 NRL STORY
Published on

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಪಟ್ಟಣದ ಶ್ರೀದತ್ತಾತ್ರೇಯ ದೇವಸ್ಥಾನದ ಮುಂದಿನ ಪುರಾತನ ಕಾಲದ ಪುಷ್ಕರಣಿಯ (ಬಾವಿ)ಯ ತಡೆಗೋಡೆ ಬಿದ್ದು ಹೋಗಿದ್ದು, ಅಪಾಯಕ್ಕೆ ಅಹ್ವಾನ ನೀಡುತ್ತಿದೆ.
ಐತಿಹಾಸಿಕ ಹಿನ್ನೆಲೆಯ ಪುಷ್ಕರಣಿ ಅನೇಕ ವರ್ಷಗಳಿಂಧ ಹಾಳು ಬಿದ್ದಿದೆ. 20 ಗುಂಟೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಬಾವಿಯಲ್ಲಿ ಬರೀ ಕಸ ಕಡ್ಡಿ, ಹೊಲಸು ತುಂಬಿದೆ. ಹೀಗಾಗಿ ಈ ಪುಷ್ಕರಣಿ ಹಾಳು ಬಾವಿಯೆಂದು ಸ್ಥಳೀಯರಿಂದ ಕರೆಸಿಕೊಳ್ಳುತ್ತಿದೆ. ಬಾವಿಯ ಸಮೀಪದಲ್ಲಿ ದೊಡ್ಡದಾದ ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರನ ದೇವಸ್ಥಾನ ಇದ್ದು. ಈ ದೇವಸ್ಥಾನದ ಪೂಜೆಗೆ ನೀರು ಬಳಸಲು ಪುಷ್ಕರಣಿಯನ್ನು ನಿರ್ಮಾಣ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಕಾಲಾಕ್ರಮೇಣ ಪುಷ್ಕರಣಿ ಹೋಗಿ ಹಾಳು ಬಾವಿಯಾಗಿ ಬದಲಾಗಿದೆ. ಆರಂಭದಲ್ಲಿ ದುರಸ್ತಿ ಕೈಗೊಂಡಿದ್ದರೆ ಇಷ್ಟರಮಟ್ಟಿಗೆ ಗಲೀಜು ತುಂಬಿಕೊಳ್ಳುತ್ತಿರಲ್ಲ. ಪ್ರಾಚ್ಯ ಇಲಾಖೆ ಅಧಿಕಾರಿಗಳು ಬಾವಿಯ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಪುಷ್ಕರಣಿಯ ಎದುರಿಗೆ ನರೇಗಲ್ಲ ಪಟ್ಟಣದ ಜನರ ಆರಾಧ್ಯ ದೈವವಾಗಿರುವ ಶ್ರೀ ದತ್ತಾತ್ರೇಯ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿದಿನ ಧಾರ್ಮಿಕ ಕಾರ್ಯಗಳು, ಮದುವೆ, ಮುಂಜಿವೆಯಂತಹ ಅನೇಕ ಶುಭ ಕಾರ್ಯಗಳು ನಡೆಯುತ್ತಿವೆ. ಆದರೆ ನೈರ್ಮಲ್ಯ ಇಲ್ಲದಿರುವುದು ಭಕ್ತರಿಗೆ ಮುಜುಗರ ತರುವಂತಿದೆ.

ಹಿರೇಬಾವಿಯ ಬಾವಿಯ ಹೊಲಸು ಮತ್ತು ದಂಡೆಯಲ್ಲಿ ರುವ ಶೌಚಗೃಹಗಳು ದುರ್ನಾತ ಬೀರುತ್ತಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಈ ಪುಷ್ಕರಣಿಯ ದಂಡೆ ಮೇಲೆ ಮಹಿಳಾ ಶೌಚಗೃಹವಿದ್ದು ದುರ್ನಾತಕ್ಕೆ ಅದು ಕೂಡ ಕಾರಣವಾಗಿದೆ. ಹೀಗಾಗಿ ಸುತ್ತಲಿನ ನಾಗರಿಕರಿಗೆ ನಿತ್ಯವೂ ನರಕ ದರ್ಶನವಾಗುತ್ತಿದೆ. ಪಪಂ ಜನಪ್ರತಿ ನಿಧಿಗಳು, ಅಧಿಕಾರಿಗಳು ತಕ್ಷಣವೇ ಬಾವಿಯ ಅಭಿವೃದ್ಧಿಗೆ ಮುಂದಾಗಬೇಕು.-ಚಂದ್ರಾಮ ಗ್ರಾಮಪುರೋಹಿತ, ನರೇಗಲ್ಲ ನಾಗರಿಕ ಇದು ನಿಜಕ್ಕೂ ಸಾರ್ವಜನಿಕರಿಗೆ ತೊಂದರೆದಾಯಕ ಸ್ಥಿತಿಯಾಗಿದೆ. ಆದಷ್ಟು ಬೇಗ ಬಾವಿ ದುರಸ್ತಿಪಡಿಸಲಾಗುವುದು. 15ನೇ ಹಣಕಾಸು ಯೋಜನೆಯಡಿ ಇದಕ್ಕಾಗಿ 8.5 ಲಕ್ಷ ರೂ. ತೆಗೆದಿರಸಲಾಗಿದ್ದು, ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ.-ಮಹೇಶ ನಿಡಶೇಸಿ, ಮುಖ್ಯಾಧಿಕಾರಿ, ಪಪಂ ನರೇಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net