

ಖಂಡೇನಹಳ್ಳಿ ಬಸವರಾಜ್ ಹಿರಿಯೂರು
ತಾಲೂಕಿನ ಕೂಡ್ಲಹಳ್ಳಿ ಗ್ರಾಮ ಸಮೀಪ ವೇದಾವತಿ-ಸುವರ್ಣಮುಖಿ ನದಿ ಸಂಗಮ ಸ್ಥಳದಲ್ಲಿನ ಸಂಗಮೇಶ್ವರ ದೇಗುಲ ಐತಿಹಾಸಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ.
ಪೂರ್ವ ದಿಕ್ಕಿನಿಂದ ಸುವರ್ಣಮುಖಿ, ದಕ್ಷಿಣ ದಿಕ್ಕಿನಿಂದ ಹರಿದು ಬರುವ ವೇದಾವತಿ ನದಿಗಳು ಕೂಡುವ ಸ್ಥಳದಲ್ಲಿರುವ ಸಂಗಮೇಶ್ವರನಿಗೆ ನಾಡಿನಾದ್ಯಂತ ಭಕ್ತರಿದ್ದಾರೆ.
ಎರಡು ನದಿಗಳು ದೇಗುಲದ ಎದುರು ಸಂಗಮವಾಗಿ ಮುಂದೆ ವೇದಾವತಿ ನದಿ ಎಂಬ ಹೆಸರಿನಲ್ಲಿ ಉತ್ತರ ದಿಕ್ಕಿನತ್ತ ಹರಿದು ಚಳ್ಳಕೆರೆ ತಾಲೂಕು ಮೂಲಕ ಆಂಧ್ರಪ್ರದೇಶ-ಬಂಗಾಳಕೊಲ್ಲಿ ಸೇರುತ್ತದೆ.
ಇಷ್ಟಾರ್ಥ ಸಿದ್ಧಿ: ಶ್ರೀ ಸಂಗಮೇಶ್ವರ ಸ್ವಾಮಿ ದರ್ಶನ ಹಾಗೂ ನದಿ ಸಂಗಮ ಸ್ಥಳದಲ್ಲಿ ಗಂಗಾ ಸ್ನಾನ, ಪಿಂಡ ಪ್ರದಾನಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ.
ಸ್ವಾಮಿಗೆ ಹರಕೆ ಸಲ್ಲಿಸಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.
ಮೈಸೂರು ಅರಸರ ಆಳ್ವಿಕೆಯಲ್ಲಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಲ್ಪಟ್ಟಿದ್ದು, ಶ್ರಾವಣ ಮಾಸ, ಯುಗಾದಿ ಇತರ ಶುಭ
ಸಂದರ್ಭದಲ್ಲಿ ಜಿಲ್ಲೆಯ ವಿವಿಧ ದೇವರ ಉತ್ಸವ ಮೂರ್ತಿಗಳನ್ನು ವೇದಾವತಿ-ಸುವರ್ಣಮುಖಿ ನದಿ ಸಂಗಮ ಸ್ಥಳಕ್ಕೆ ಕರೆತಂದು ಪುಣ್ಯೋಜನ ಮಾಡಲಾಗುತ್ತದೆ.
ದೇಗುಲದ ಎದುರು ಸುಂದರ ಕೆತ್ತನೆಯ ಕಲ್ಲುಕಂಬ, ಗರ್ಭ ಗುಡಿಯಲ್ಲಿ ಶಿವಲಿಂಗ, ಬಸವಣ್ಣ, ಗಣೇಶ ಮೂರ್ತಿಗಳಿವೆ. ದೇವಸ್ಥಾನದ ಸುತ್ತ ಸುಂದರ ಮರ ಗಿಡ, ಹಸಿರು ಪರಿಸರ, ಆಹ್ಲಾದಕರ ವಾತಾವರಣ ಜನರನ್ನು ಆಕರ್ಷಿಸುತ್ತದೆ.
ಇಲ್ಲಿ ವರ್ಷವಿಡೀ ವಿವಾಹ ಕಾರ್ಯ ನೆರವೇರುತ್ತವೆ. ಶ್ರಾವಣ ಮಾಸದ ಕಡೇ ಸೋಮವಾರ ವೈಭವದಿಂದ ಶ್ರೀ ಸ್ವಾಮಿ ಜಾತ್ರೋತ್ಸವ ನೆರವೇರುತ್ತದೆ.
ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಶಿಥಿಲಗೊಂಡಿದ್ದ ಐತಿಹಾಸಿಕ ದೇವಾಲಯವನ್ನು ಭಕ್ತರು, ದಾನಿಗಳ ನೆರವಿನಿಂದ ಜೀರ್ಣೋದ್ಧಾರ ಮಾಡಿದ್ದಾರೆ.
ದೇಗುಲದಲ್ಲಿ ನಿತ್ಯ ಪೂಜೆ: ಅರ್ಚನೆ, ಅಭಿಷೇಕ, ಎಲೆ ಪೂಜೆ, ಎಳನೀರು ಅಭಿಷೇಕ, ಅಷ್ಟೋತ್ತರ, ನಿತ್ಯ ಅಲಂಕಾರ, ಶ್ರಾವಣ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ, ನಿತ್ಯ ಇತರ ಧಾರ್ಮಿಕ ಕಾರ್ಯಗಳು ನಡೆಯುತ್ತವೆ.
ಪ್ರವಾಸಿ ತಾಣ: ವರುಣನ ಕೃಪೆಯಿಂದ ಈ ಬಾರಿ ವೇದಾವತಿ-ಸುವರ್ಣಮುಖಿ ನದಿಗೆ ಜೀವಕಳೆ ಬಂದಿದ್ದು, ದೇವಸ್ಥಾನದ ಕೂಗಳತೆ ದೂರದಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ.
ವರ್ಷ ಪೂರ್ತಿ ಮೌನ ಗಂಗೆಯಂತೆ ಹರಿಯುವ ಎರಡು ನದಿಗಳ ಹಿತವಾದ ಪರಿಸರ, ಸಮೀಪದಲ್ಲಿ ಗಿಡ ಮರ, ಹಕ್ಕಿ ಪಕ್ಷಿಗಳ ಕಲರವ, ಕಲ್ಪವೃಕ್ಷಗಳ ತೋಟಗಳ ಸುಂದರ ಪರಿಸರ ಪ್ರವಾಸಿಗರು-ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಮುದ ನೀಡುವ ಸ್ಥಳವಾಗಿದೆ.
ಇಲ್ಲಿ ವರ್ಷವಿಡೀ ವಿವಾಹ, ಶುಭ ಕಾರ್ಯ ನೆರವೇರುತ್ತದೆ.
ಎಲ್ಲಿದೆ: ಹಿರಿಯೂರಿನಿಂದ 20 ಕಿಮೀ ದೂರದಲ್ಲಿದೆ. ಹಿರಿಯೂರು-ಧರ್ಮಪುರ ರಾಜ್ಯ ಹೆದ್ದಾರಿ 24ರ ಮಾರ್ಗದಲ್ಲಿ ಬರುವ ಭಕ್ತರು ಕೂಡ್ಲಹಳ್ಳಿ ಗೇಟ್‌ನಿಂದ ದೇವಸ್ಥಾನ ತಲುಪಬಹುದು.
ರಾಜ್ಯದ ವಿವಿಧೆಡೆಯಿಂದ ನೂರಾರು ಭಕ್ತರು ಸಂಗಮೇಶ್ವರ ದೇಗುಲಕ್ಕೆ ಆಗಮಿಸುತ್ತಾರೆ. ಭಕ್ತರ ಅನುಕೂಲ ಹಾಗೂ ಶುಭ ಕಾರ್ಯಕ್ಕೆ ಕಲ್ಯಾಣ ಮಂಟಪ, ವಸತಿ ಗೃಹ ಸೇರಿ ಮೂಲ ಸೌಲಭ್ಯ ಕಲ್ಪಿಸುವ ಅವಶ್ಯವಿದೆ.ವೀರಭದ್ರಯ್ಯ, ದೇಗುಲದ ಅರ್ಚಕ