

ಶಿಗ್ಗಾಂವಿ(ಗ್ರಾ): ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಒಂದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಅಣ್ಣಪ್ಪ ಹೆಗಡೆ ಹೇಳಿದರು.
ಪಟ್ಟಣದ ಸಿಡಿಪಿಒ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯು ಮಿಷನ್ ಶಕ್ತಿಯಡಿ ಮೊದಲ ಮಗುವಿಗೆ ಎರಡು ಕಂತುಗಳಲ್ಲಿ 5000 ರೂಪಾಯಿ ಹಾಗೂ ಎರಡನೇ ಹೆಣ್ಣು ಮಗುವಿಗೆ 6000 ರೂ.ಗಳನ್ನು ಒಂದು ಕಂತಿನಲ್ಲಿ ನೇರ ನೀಡುವ ಯೋಜನೆಯಾಗಿದೆ. ಸರ್ಕಾರಿ ನೌಕರರನ್ನು ಹೊರತು ಪಡಿಸಿ ಉಳಿದೆಲ್ಲ ಮಹಿಳೆಯರು ಈ ಯೋಜನೆ ಸದುಪಯೋಗ ಪಡೆಯಬಹುದು.
ಈ ಯೋಜನೆ 2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಜಾರಿಗೆ ಬಂದಿದ್ದು, ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟುವ ಉದ್ದೇಶದಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಪರಿಹಾರ ಒದಗಿಸಲು ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿಗೊಳಿಸಿದೆ. ಮೊದಲ ಹೆರಿಗೆಗೆ 5000 ರೂ.ಗಳನ್ನು ತಾಯಿ-ಮಗುವಿನ ಆರೈಕೆಗೆ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ಖಾತೆಗೆ ಎರಡು ಕಂತುಗಳಲ್ಲಿ ನೀಡಲಾಗುತ್ತದೆ. ಈ ಹಣವನ್ನು 60ಃ40 ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತವೆ. ಈ ಯೋಜನೆ ಮೊದಲ ಎರಡು ಹೆಣ್ಣು ಮಕ್ಕಳಿಗೆ ಅನುಷ್ಠಾನಗೊಳಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಅರ್ಜಿ ಸಲ್ಲಿಸಲು ಅವಕಾಶವಿದೆ. ಅಲ್ಲದೆ ನಾಗರಿಕರು ಇಲಾಖೆ ವೆಬ್‌ಸೈಟ್‌ಗೆ ಹೋಗಿ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.
ಜಿಲ್ಲಾ ಸಹಾಯಕ ಸಂಯೋಜಕಿ ಕಸ್ತೂರಿ ಎಂ., ಅನ್ನಪೂರ್ಣ ಹಳ್ಳಿಗುಡಿ, ನಿರ್ಮಲಾ ಇಟಗಿ, ವಿಜಯಾ ಹಿರೇಮಠ, ಸುಜಾತಾ ಜವಳಗೇರಿ, ರೇಣುಕಾ ತಳವಾರ, ಪೈರೋಜಾ ನಧಾಪ ಸೇರಿದಂತೆ ಹಾನಗಲ್, ಶಿಗ್ಗಾಂವಿ, ಸವಣೂರ ತಾಲೂಕಿನ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.