ನನೆಗುದಿಗೆ ಬಿದ್ದಿದೆ ಮಹತ್ವಾಕಾಂಕ್ಷೆಯ ಪೈಪ್‌ಲೈನ್ ಗ್ಯಾಸ್ ಯೋಜನೆ

piped-gas
Published on

ಆರ್.ಕೃಷ್ಣ ಮೈಸೂರು
ಮನೆಗಳಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಸಬೇಕು ಎನ್ನುವ ಮಹತ್ವಾಕಾಂಕ್ಷೆಯ ಯೋಜನೆ ನನೆಗುದಿಗೆ ಬಿದ್ದಿದೆ.
ಮನೆಗಳಿಗೆ ನೇರವಾಗಿ ಅಡುಗೆ ಅನಿಲ ಪೂರೈಕೆ ಮಾಡಲಾಗುವ ಉದ್ದೇಶ ಹೊಂದಿರುವ ಯೋಜನೆಯಿಂದ ಜನರಿಗೆ ಯಾವುದೇ ರೀತಿಯಲ್ಲಿ ಗ್ಯಾಸ್ ಅಭಾವ ಉಂಟಾಗುವುದಿಲ್ಲ. ಅಲ್ಲದೆ ಕಡಿಮೆ ಬೆಲೆಗೆ ಸೌಲಭ್ಯ ದೊರೆಯಲಿದೆ ಎನ್ನುವ ಭಾರಿ ಪ್ರಚಾರದೊಂದಿಗೆ ಸದ್ದು ಮಾಡಿದ್ದ ಯೋಜನೆ ಈಗ ಕುಂಟುತ್ತಾ ಸಾಗಿದೆ.
ಎಜಿ ಆ್ಯಂಡ್ ಪಿ ಪ್ರಥಮ್ ಕಂಪನಿ ನಿರ್ವಹಣೆಯಲ್ಲಿರುವ ಕಾಮಗಾರಿ ನಗರದ ರಿಂಗ್ ರಸ್ತೆಯಲ್ಲಿ ನಡೆಯುತ್ತಿದೆ. ಆಯ್ದ ಕೆಲ ಬಡಾವಣೆಗಳಲ್ಲಿ ಈಗಾಗಲೇ ಗ್ಯಾಸ್ ಪೈಪ್‌ಲೈನ್ ಅಳವಡಿಸಿ ಸಂಪರ್ಕ ಕೊಳವೆಗಳನ್ನು ಹಾಕಿದೆ. ಮೀಟರ್ ಅಳವಡಿಸಲು ಸಿದ್ಧತೆ ಕೂಡ ನಡೆದಿದೆ. ಆದರೆ ಮುಖ್ಯ ಕಾಮಗಾರಿ ಇನ್ನೂ ನಡೆದೇ ಇಲ್ಲ. ಜತೆಗೆ ಮುಂದೆ ಪೈಪ್‌ಲೈನ್ ಅಳವಡಿಸಲು ರಸ್ತೆಯನ್ನು ಅಗೆಯಬೇಕಾಗಿದೆ. ಇದಕ್ಕೆ ಸರ್ಕಾರದಿಂದ ಅನುಮತಿ ದೊರೆತಿಲ್ಲ. ಈ ಕಾರಣದಿಂದ ಯೋಜನೆಗೆ ನಿರೀಕ್ಷಿತ ವೇಗ ಇಲ್ಲದಂತಾಗಿದೆ.
ಪೈಪ್‌ಲೈನ್ ಹಾಕಲು ರಸ್ತೆ ಅಗೆಯಬೇಕಿದ್ದು, ಇದಕ್ಕೆ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಪಾಲಿಕೆ ಪತ್ರ ಬರೆದಿದೆ. ಆದರೆ ಅಲ್ಲಿಂದ ಈವರೆಗೆ ಯಾವುದೇ ಉತ್ತರ ಬಾರದ್ದರಿಂದ ಪೈಪ್‌ಲೈನ್ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಅಧಿಕಾರಿಗಳಲ್ಲಿ ಉಂಟಾದ ಗೊಂದಲ:
ನಗರ ಹೊರವಲಯ ಸೇರಿದಂತೆ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಕಾಮಗಾರಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಸ್ಥಗಿತಗೊಂಡಿದೆ. ಪೈಪ್‌ಲೈನ್ ಅಳವಡಿಕೆಗೆ ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಪಾವತಿ ವಿಚಾರದಲ್ಲಿ ಪಾಲಿಕೆ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ.
ನಗರಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಗೆಯಲು ಪಾಲಿಕೆಗೆ ಒಂದು ಮೀಟರ್‌ಗೆ 2 ಸಾವಿರ ರೂ. ಶುಲ್ಕ ಪಾವತಿಸಬೇಕಿತ್ತು. ಇದರಿಂದ ಕಾಮಗಾರಿ ವೆಚ್ಚ ಹೆಚ್ಚಾಗಲಿದ್ದು, ಜನಸಾಮಾನ್ಯರಿಗೆ ಹೊರೆಯಾಗುತ್ತದೆ. ಆದ್ದರಿಂದ ರಸ್ತೆ ಅಗೆತಕ್ಕೆ ನೀಡುವ ಶುಲ್ಕವನ್ನು ಕಡಿಮೆ ಮಾಡಬೇಕು ಎಂದು ಎಜಿ ಆ್ಯಂಡ್ ಪಿ ಪ್ರಥಮ್ ಕಂಪನಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕಂಪನಿಯ ಮನವಿಯನ್ನು ಪುರಸ್ಕರಿಸಿದ್ದ ಸರ್ಕಾರ ಯೋಜನೆ ಪೂರ್ಣಗೊಳ್ಳಲು ಅನುಕೂಲವಾಗುವಂತೆ ಒಂದು ಮೀಟರ್ ರಸ್ತೆ ಅಗೆಯಲು ಒಂದು ರೂ. ಶುಲ್ಕ ಪಾವತಿಸುವಂತೆ ಅನುಮತಿ ನೀಡಿತ್ತು. ಇದರಡಿ ರಾಜ್ಯದೆಲ್ಲೆಡೆ ಕಂಪನಿ ನಡೆಸುತ್ತಿರುವ ಕಾಮಗಾರಿಗೆ 1 ಮೀ. ರಸ್ತೆ ಅಗೆಯಲು ಒಂದು ರೂ. ಶುಲ್ಕ ಪಡೆಯಲು ಅನುಮತಿ ನೀಡಲಾಗಿದೆ. ಆದರೆ ಮೈಸೂರು ನಗರ ಪಾಲಿಕೆಯು 1 ಮೀಟರ್ ರಸ್ತೆ ಅಗೆತಕ್ಕೆ 1 ರೂ. ಶುಲ್ಕ ಪಾವತಿಗೆ ಅನುಮತಿ ನೀಡಿದರೆ ಬೇರೆ ಕಂಪನಿಗಳಿಗೂ ಇದೇ ಅವಕಾಶ ನೀಡಬೇಕಾಗುತ್ತದೆ. ಹಾಗಾಗಿ ರಸ್ತೆ ದುರಸ್ತಿ ಮಾಡಲು ನಗರಪಾಲಿಕೆಗೆ ತೊಂದರೆ ಆಗುತ್ತದೆ. ಆದ್ದರಿಂದ ಮುಂದೆ ತೊಂದರೆ ಆಗದಂತೆ ನೀತಿ ನಿಯಮ ರೂಪಿಸಿ ಅನುಮತಿ ನೀಡುವಂತೆ ಪತ್ರದಲ್ಲಿ ಪಾಲಿಕೆ ಅಧಿಕಾರಿಗಳು ಕೋರಿದ್ದಾರೆ.
ದರ ಸಮರ ಜಟಾಪಟಿ:
ದರ ಸಮರದ ಜಟಾಪಟಿಯಿಂದ ಎರಡು ವರ್ಷದಿಂದ ನಗರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಅಳವಡಿಕೆ ಕಾರ್ಯ ನಿಂತಿದೆ. ನಗರದ 65 ವಾರ್ಡ್‌ಗಳಲ್ಲಿ 800 ಕಿ.ಮೀ. ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಬೃಹತ್ ಯೋಜನೆಗೆ ಪಾಲಿಕೆಯಿಂದ ಸಕಾಲದಲ್ಲಿ ಅನುಮತಿ ಸಿಗದೇ ಇರುವುದರಿಂದ ಪ್ರಗತಿ ಕುಂಠಿತಗೊಂಡಿದೆ. ಕೇವಲ ಮೂರು ವಾರ್ಡ್‌ಗಳಲ್ಲಿ 45 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ.
ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಅನಿಲ ಘಟಕ ಸ್ಥಾಪಿಸಿರುವ ಎಜಿ ಆ್ಯಂಡ್ ಪಿ ಪ್ರಥಮ್ ಕಂಪನಿ, ನಗರದ ರಿಂಗ್ ರಸ್ತೆಯ ಸುತ್ತಲೂ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಸಿದೆ. ಕೈಗಾರಿಕಾ ಪ್ರದೇಶಗಳಲ್ಲಿಯೂ ಸಾಕಷ್ಟು ಕೈಗಾರಿಕೆಗಳಿಗೆ ಗ್ಯಾಸ್ ಪೈಪ್‌ಲೈನ್ ಮೂಲಕ ಅನಿಲ ಪೂರೈಕೆ ಮಾಡುತ್ತಿದೆ. ಅಲ್ಲದೆ ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿನ ಬಡಾವಣೆಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಪಾವತಿಸಿ ಪೈಪ್‌ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿಯೂ ದರ ನಿಗದಿಗೆ ಅವಕಾಶ ನೀಡಬೇಕು ಎಂದು ಎಜಿ ಆ್ಯಂಡ್ ಪಿ ಪ್ರಥಮ್ ಕಂಪನಿಯ ಅಧಿಕಾರಿಗಳು ನಗರಪಾಲಿಕೆಗೆ ಕೋರಿದ್ದಾರೆ.

ತಕ್ಷಣ ಅನುಮತಿ ನೀಡಬೇಕು
ಸಂಸದ ಪ್ರತಾಪಸಿಂಹ ಅವರ ಪ್ರಯತ್ನದಿಂದ ನನ್ನ ಅವಧಿಯಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆಗೆ ಚಾಲನೆ ದೊರೆತಿತ್ತು. ಆದರೆ ರಸ್ತೆ ಅಗೆಯುವ ಸಂಬಂಧ ದರ ನಿಗದಿ ಸಂಬಂಧ ಗೊಂದಲ ಉಂಟಾಗಿದ್ದು, ಈ ಗೊಂದಲ ಬಗೆಹರಿಸಬೇಕು. ರಿಯಾಯಿತಿ ಶುಲ್ಕ ವಸೂಲಿ ಮಾಡುವಂತೆ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಿದೆ. ಆದ್ದರಿಂದ ನಗರ ಪಾಲಿಕೆ ಒಂದು ರೂ. ಶುಲ್ಕ ಪಡೆಯುವ ಮೂಲಕ ಯೋಜನೆ ಪೂರ್ಣಗೊಳ್ಳುವಂತೆ ಮಾಡಬೇಕಿದೆ

ಶಿವಕುಮಾರ್, ಮಾಜಿ ಮೇಯರ್

ಸರ್ಕಾರದಿಂದ ಮಾಹಿತಿ ಬಂದಿಲ್ಲ
ನಗರದಲ್ಲಿ ಕೈಗಾರಿಕೆ ಬೆಳವಣಿಗೆಗೆ ಸಾಕಷ್ಟು ಕಂಪನಿಗಳು ಬರುವುದರಿಂದ ದರ ನಿಗದಿ ಸಂಬಂಧ ಸ್ಪಷ್ಟ ಆದೇಶ ನೀಡುವಂತೆ ಸರ್ಕಾರವನ್ನು ಕೋರಲಾಗಿದೆ. ಒಂದು ರೂ.ಗೆ ಅಗೆಯಲು ಅವಕಾಶ ಕೊಟ್ಟರೆ ಇತರ ಕಂಪನಿಗಳು ಅದೇ ದರ ಕೋರುತ್ತವೆ. ಆದ್ದರಿಂದ ಸರ್ಕಾರದ ಉತ್ತರಕ್ಕೆ ಎದುರು ನೀಡಲಾಗುತ್ತಿದೆ.
ಡಾ.ಎನ್.ಎನ್.ಮಧು
ಆಯುಕ್ತೆ, ನಗರಪಾಲಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net